ಸುಂಟಿಕೊಪ್ಪ, ಮೇ 23: ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವದ ಅಂಗವಾಗಿ ಮೈಸೂರು ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಡಾ. ಥಾಮಸ್ ಅಂತೋಣಿ ವಾಜ್ಹಪಳ್ಳಿ ಅವರಿಂದ ಆಡಂಬರ ಬಲಿ ಪೂಜೆ ಹಾಗೂ ಪರಮಪ್ರಸಾದ ಆಶೀರ್ವಚನ ನೀಡುವದರೊಂದಿಗೆ ವಾರ್ಷಿಕೋತ್ಸವ ವಿಜೃಂಭಣೆಯಿಂದ ಸಮಾಪ್ತಿಕಂಡಿತು. ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ವಿವಿಧ ಧರ್ಮಕೇಂದ್ರಗಳಿಂದ ಆಗಮಿಸಿದ್ದ 15ಕ್ಕೂ ಮಿಕ್ಕಿ ಧರ್ಮಗುರುಗಳು ಈ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ದೇವಾಲಯದಲ್ಲಿ ಅಂಬು ಕಾಣಿಕೆ ಹಾಗೂ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿ ಯವರನ್ನು ಇರಿಸಿ ಭಕ್ತಾದಿಗಳು ಮೊಂಬತ್ತಿಯನ್ನು ಹಿಡಿದುಕೊಂಡು ಪ್ರಾರ್ಥನೆ ಸಲ್ಲಿಸುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು.