ಮಡಿಕೇರಿ, ಮೇ 23: ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಿದ ಸಮಾರಂಭವು ಬಿಜೆಪಿಯೇತರ ಪಕ್ಷಗಳು ಒಂದಾಗಲು ಸಾಕ್ಷಿಯಾಯಿತು.ಬೆಂಗಳೂರು ವಿಧಾನಸೌಧದ ಎದುರು ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಕೇವಲ ಎಂಟು ನಿಮಿಷಗಳ ಕಾಲ ನಡೆದ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿವಾಲ ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ನೂತನ ಉಪ ಮುಖ್ಯಮಂತ್ರಿ ಹಿಂದಿನ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. 12 ವರ್ಷಗಳ ಹಿಂದೆ ಬಿಜೆಪಿ ಯೊಂದಿಗೆ ಕೈ ಜೋಡಿಸಿ ಮುಖ್ಯಮಂತ್ರಿ ಹುದ್ದೆ ಪಡೆದಿದ್ದ ಕುಮಾರಸ್ವಾಮಿ ಈ ಬಾರಿ ಕಾಂಗ್ರೆಸ್‍ನ ಬೆಂಬಲ ಪಡೆದು ರಾಜ್ಯ ನೂತನ ಸಾರಥ್ಯ ವಹಿಸಿ ಕೊಂಡರು. ದೇವರು ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಹೆಚ್‍ಡಿಕೆ ಪ್ರಮಾಣ ಮಾಡಿದರೆ; ಪದವಿ ಸ್ವೀಕಾರ ಸಂದರ್ಭ ಜಿ. ಪರಮೇಶ್ವರ್, ದೇವರನ್ನು ನೆನೆದರು.ದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಪ್ರಬಲವಾಗಿ ಎದುರಿಸಲು ಬಿಜೆಪಿಯೇತರ ಎಲ್ಲಾ ಪಕ್ಷಗಳು ಒಂದಾಗ ಬೇಕೆಂಬ ಹಲವರ ಆಶಯಕ್ಕೆ ಇಂದಿನ ಕಾರ್ಯಕ್ರಮ ನಾಂದಿ ಹಾಡಿತು. ಕಾಂಗ್ರೆಸ್ ಪಕ್ಷದ ಪ್ರಮುಖೆ ಸೋನಿಯಾಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇತ್ತೀಚೆಗಷ್ಟೆ ಬಿಜೆಪಿ ಸಖ್ಯ ತೊರೆದಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ವಿಜಯನ್, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಎಸ್‍ಪಿ ಪ್ರಮುಖೆ ಮಾಯಾವತಿ, ಸಿ.ಪಿ.ಐ.ಎಂ. ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ರಾಜ್ಯ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಸರ್ಕಾರಕ್ಕೆ ಶುಭ ಹಾರೈಸಿದರು. ಬಿಜೆಪಿಯ ಯಾವ ಪ್ರಮುಖರು ಕೂಡ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ಹನ್ನೆರಡು ವರ್ಷಗಳ ಹಿಂದೆ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಸೇರಿಕೊಂಡು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಈ ವೇಳೆ 20 ತಿಂಗಳು ಕುಮಾರಸ್ವಾಮಿ, 20 ತಿಂಗಳು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಗ್ಗೆ ಒಪ್ಪಂದ ವಾಗಿತ್ತಾದರೂ, (ಮೊದಲ ಪುಟದಿಂದ) ಮೊದಲ 20 ತಿಂಗಳು ಅಧಿಕಾರಿ ಚಲಾಯಿಸಿದ ಹೆಚ್‍ಡಿಕೆ, ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣೆ ನಡೆದು ಭಾರತೀಯ ಜನತಾ ಪಾರ್ಟಿ ಬಹುಮತದೊಂದಿಗೆ 2008ರಲ್ಲಿ ಅಧಿಕಾರದ ಗದ್ದುಗೆ ಏರಿತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆದರೆ ಯಡಿಯೂರಪ್ಪ ಅವರು ಪ್ರಕರಣವೊಂದರಲ್ಲಿ ಆರೋಪಿಯಾಗಿ ಲೋಕಾಯುಕ್ತರಿಂದ ಬಂಧಿಸಲ್ಪಟ್ಟು ಜೈಲು ಸೇರಿದಾಗ ಕೆಲ ಸಮಯ ಡಿ.ವಿ. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಇಬ್ಬರೂ ಒಬ್ಬರ ಹಿಂದೆ ಒಬ್ಬರಂತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. ಬಿಜೆಪಿ ಅವಧಿಯಲ್ಲಿ ಹಲವು ವಿವಾದಳಿಂದಾಗಿ ಕರ್ನಾಟಕ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು.

ನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಅಲಂಕರಿಸಿ ಐದು ವರ್ಷಗಳ ಕಾಲ ಆಡಳಿತ ನಡೆಸಿದರು.

ಈ ಬಾರಿ ತಾ. 12ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಬಿಎಸ್‍ಪಿ 1, ಪಕ್ಷೇತರ 1 ಸ್ಥಾನದ ಫಲಿತಾಂಶ ಹೊರ ಬಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಆದರೂ, ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಬಿಜೆಪಿಯನ್ನು ರಾಜ್ಯಪಾಲ ವಜೂಬಾಯಿ ವಾಲ ಅವರು ಆಹ್ವಾನಿಸಿ ಸರ್ಕಾರ ರಚಿಸುವಂತೆಯೂ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. ಅದರಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 15 ದಿನದಲ್ಲಿ ಬಹುಮತ ಸಾಬೀತುಪಡಿಸುವದಾಗಿ ಹೇಳಿದ್ದರು. ಈ ಬೆಳವಣಿಗೆಗಳ ನಡುವೆ ಬಿಜೆಪಿಗೆ ಬಹುಮತವಿಲ್ಲದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚಿಸುವ ಬಗ್ಗೆಯು ರಾಜ್ಯಪಾಲರ ಗಮನ ಸೆಳೆದಿತ್ತಾದರೂ, ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒಂದು ದಿನದ ಕಾಲವಕಾಶ ನೀಡಿ ಬಹುಮತ ಸಾಬೀತುಪಡಿಸುವಂತೆ ಬಿಜೆಪಿಗೆ ಸೂಚಿಸಿತ್ತು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೊಂಡು ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಸುಭದ್ರ ಸರಕಾರ: ಸಿಎಂ ಕುಮಾರಸ್ವಾಮಿ

ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಸಮ್ಮಿಶ್ರಸರ್ಕಾರ ಸುಭದ್ರವಾಗಿ ಸದೃಢವಾಗಿ ಸರ್ಕಾರ ನಡೆಸುತ್ತದೆ. ಯಾವದೇ ಆತಂಕ ಬೇಡ ಎಂದು ನೂತನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದರು.

ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಮಿತ್ರಪಕ್ಷಗಳಿಗೆ ಧನ್ಯವಾದ ಅರ್ಪಿಸಿದರು. ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಯಾವದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಹೀಗಾಗಿ ಕಳೆದ ಒಂದು ವಾರದಿಂದ ಅಸ್ಥಿರತೆ ಉಂಟಾಗಿತ್ತು. ಇಂದಿನ ಅಸ್ಥಿರತೆಗೆ ರಾಜಕಾರಣಿಗಳು ಕಾರಣರಲ್ಲ. ರಾಜ್ಯದಲ್ಲಿ ಯಾವದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನೆಲೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ ಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಇದಕ್ಕೆ ಕಾರಣರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದರು.

ನಾನು ಇತ್ತೀಚಿನ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅತ್ಯಂತ ಸುಭದ್ರ ಸದೃಢವಾಗಿ ಸರ್ಕಾರ ನಡೆಯುತ್ತೆ. ಯಾವದೇ ಭಿನ್ನಭಿಪ್ರಾಯಗಳಿಗೆ ಅವಕಾಶ ಮಾಡಿಕೊಡಲ್ಲ. ನೂತನ ಸರ್ಕಾರದ ಬಗ್ಗೆ ಯಾವದೇ ಅನುಮಾನ ಬೇಡ.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಮ್ಮಿಶ್ರ ಸರ್ಕಾರ ಅನಿವಾರ್ಯ. ನಾಡಿದ್ದು ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತೇವೆ.

ಬಹುಮತದೊಂದಿಗೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದಿದ್ದೆ. ಆದರೆ ನಾನಿರುವದು ಸಮ್ಮಿಶ್ರ ಸರ್ಕಾರದಲ್ಲಿ. ಹೀಗಾಗಿ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಜತೆ ಚರ್ಚಿಸಬೇಕಿದೆ. ಈ ಸಾಲ ಮನ್ನಾ ಬಗ್ಗೆ ಒಂದು ಬ್ಲೂಪ್ರಿಂಟ್ ಇದೆ. ಸಾಲಮನ್ನಾ ಕ್ರೆಡಿಟ್ ಕಾಂಗ್ರೆಸ್‍ಗೂ ಸಲ್ಲುವಂತೆ ಮಾಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಎಲ್ಲರಿಗೂ ನ್ಯಾಯ, ಎಲ್ಲರಿಗೂ ಸೂರು ಸಿಗಬೇಕು. ಎಲ್ಲರಿಗೂ ಶಾಂತಿ ಸಿಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ ಅವರ ಅಶ್ವಮೇಧಯಾಗ ಕುದುರೆಯನ್ನು ಕಟ್ಟಿಹಾಕಿದ್ದೇವೆ. ಜೀವ ಇಲ್ಲದ ಕುದುರೆಯನ್ನ ಹಿಡಿದು ಅಮಿತ್ ಶಾ ಆಟವಾಡಬೇಕು ಎಂದು ಕುಹಕವಾಡಿದರು.

ನಾನು ಚುನಾವಣೆ ವೇಳೆ ಸ್ಪಷ್ಟ ಬಹುಮತ ಬರದೇ ಇದ್ದರೆ, ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದು ನಿಜ. ಆದರೆ, ದೇಶದ ಇವತ್ತಿನ ಪರಿಸ್ಥಿತಿಯಲ್ಲಿ ದೇಶದ ಹಲವು ಹಿರಿಯರ ಮಾರ್ಗದರ್ಶನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆ ಹೋಗುವದು ಅನಿವಾರ್ಯ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಬಿಜೆಪಿ ನಾಯಕರು ಬಹಳಷ್ಟು ಟೀಕೆಗಳನ್ನು ಮಾಡಿದ್ದಾರೆ. ಅವರಿಗೆ ಸದನದಲ್ಲೇ ಉತ್ತರ ಕೊಡುತ್ತೇನೆ. ನಾನು ಸಾಲಮನ್ನಾ ಮಾಡುವದಿಲ್ಲ ಎಂದು ಎಲ್ಲೂ ಹೇಳಿಲ್ಲ. ಚುನಾವಣೆ ವೇಳೆ ಸ್ವತಂತ್ರ ಸರ್ಕಾರ ಬಂದರೆ 24 ಗಂಟೆಯೊಳಗೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ, ಇದೀಗ ನಾನು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದೇನೆ. ಎರಡೂ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪರಿಗಣಿಸಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ವಿಚಾರ ಮಾಡಿ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಆರ್ಥಿಕ ತಜ್ಞರ ಸಲಹೆ ಪಡೆದು ಹಾಗೂ ಬಹುಮತ ಸಾಬೀತಾದ ಬಳಿಕ ಸಾಲ ಮನ್ನಾ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದರು. ಜನರಿಗೆ ಪ್ರತಿಭಟನೆಯ ಅಸ್ತ್ರ ಕೊಡುವದಿಲ್ಲ ಎಂದು ನುಡಿದರು.

ಹಿಂದಿನ ಸರ್ಕಾರ ಆರಂಭಿಸಿರುವ ಯೋಜನೆಗಳನ್ನು ಮುಂದುವರೆಸುತ್ತೇನೆ. ಜನರಿಂದ ಜನರಿಗಾಗಿ ಜನರಿಗೋಸ್ಕರವಾಗಿರುವ ಸರ್ಕಾರ ನೀಡುತ್ತೇನೆ, ರಾಜಕೀಯ ಘಟನೆಗಳನ್ನು ಬದಿಗಿಟ್ಟು, ಅಭಿವೃದ್ಧಿ ಪರ ಆಡಳಿತ ನೀಡುತ್ತೇವೆ ಎಂದು ಕುಮಾರ ಸ್ವಾಮಿ ನುಡಿದರು.

ಲಿಂಗಾಯತ ಸ್ವಾಮೀಜಿಗೆ ಎಚ್ಚರಿಕೆ

ಲಿಂಗಾಯತ ಸ್ವಾಮೀಜಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಖಂಡಿಸಿದ ಸಿಎಂ ಕುಮಾರಸ್ವಾಮಿ, ಸ್ವಾಮೀಜಿಗಳು ಧರ್ಮದ ಕಾರ್ಯ ಮಾಡಬೇಕೇ ಹೊರತು, ರಾಜಕೀಯ ಮಾಡಲು ಸಲಹೆ ನೀಡುವದು ಬೇಡ. ನಾನು ಯಾವದೇ ಜಾತಿ ರಾಜಕಾರಣ ಮಾಡಲ್ಲ. ಸ್ವಾಮೀಜಿ ಅವರ ಮಾತು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇವರು ನನಗೆ ಅವಕಾಶ ಕೊಟ್ಟಿದ್ದಾನೆ. ಆರೂವರೆ ಕೋಟಿ ಜನರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಕುಮಾರಸ್ವಾಮಿ ಹೇಳಿದರು.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಂದ ಫಲಿತಾಂಶದ ದಿನವೇ ಅಮಿತ್ ಶಾ, ಮೋದಿ ಅವರ ಅಶ್ವಮೇಧವನ್ನು ನಾವೇ ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಕಾಂಗ್ರೆಸ್ - ಜೆಡಿಎಸ್ ಒಗ್ಗೂಡಿ ಈಗ ರಾಜ್ಯದಲ್ಲಿ ಅಶ್ವಮೇಧಯಾತ್ರೆ ತಡೆದಿದ್ದೇವೆ ಎಂದರು.