ಮಡಿಕೇರಿ, ಮೇ 24: ಇತ್ತೀಚಿನ ವರ್ಷಗಳಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದ ತೀರ್ಥ ಕ್ಷೇತ್ರದ ಬ್ರಹ್ಮಕುಂಡಿಕೆಗೆ ಬರುವ ಜಲ ಮೂಲಕ್ಕೂ ತಡೆಯಾಗಿದ್ದು, ಮೇಲ್ನೊಟಕ್ಕೆ ಸನ್ನಿಧಿಯು ಅಭ್ಯುದಯ ಗೊಂಡಿರುವಂತೆ ಭಾಸವಾದರೂ, ದೈವ ಅಪರಾಧಗಳೇ ಅಧಿಕವಾಗಿವೆ ಎಂದು ಇಂದು ಚತುರ್ಥ ದಿನದ ಅಷ್ಟಮಂಗಲ ವೇಳೆ ಗೋಚರ ಫಲ ಲಭಿಸಿದೆ.ಕಾವೇರಿಯಂತಹ ಮಹಾನ್ ನದಿ ದೇವತೆಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಯಿಂದ ಜಲಮೂಲ ಸೆಲೆಯು ಅಡೆತಡೆಗಳನ್ನು ಎದುರಿಸು ವಂತಾಗಿ, ಕಾವೇರಿ ಮಾತೆಯು ಸಂಕಟ ಅನುಭವಿಸುವ ಸನ್ನಿವೇಶ ದಿಂದ ಕೊಡಗು ಮಾತ್ರವಲ್ಲದೆ, ಜೀವನದಿ ಕಡಲು ಸೇರುವ ಪ್ರದೇಶ ತನಕ ಅಗ್ನಿಕಾರಕ ಕೋಪವನ್ನು ಭವಿಷ್ಯದಲ್ಲಿ ಕಾಣುವ ಅಪಾಯದ ಮುನ್ಸೂಚನೆ ವ್ಯಕ್ತವಾಯಿತು.ಭಂಡಾರ ಸೋರಿಕೆ : ಕ್ಷೇತ್ರದಲ್ಲಿ ಭಕ್ತರಿಂದ ಸಲ್ಲಿಕೆಯಾಗುವ ಭಂಡಾರ ಸಮರ್ಪಕ ನಿರ್ವಹಣೆಯಿಲ್ಲದೆ ಆದಾಯ - ಖರ್ಚು ತಾಳೆಯಾಗದ ಪ್ರಸಂಗ ಉಂಟಾಗಿದ್ದು, ಪರ್ವ ಕಾಲದಲ್ಲಿ

(ಮೊದಲ ಪುಟದಿಂದ) ತುಲಾ ಸಂಕ್ರಮಣ ಜಾತ್ರೆ ವೇಳೆ ಆಭರಣ ತಂದಿರಿಸಲು ಭದ್ರತಾ ಕೊಠಡಿ, ಅರ್ಚಕರಿಗೆ ತಂಗಲು ವ್ಯವಸ್ಥೆ, ಸಿಬ್ಬಂದಿಗಳಿಗೆ ಸೂರು ಇತ್ಯಾದಿ ಶಿಥಿಲಗೊಂಡಿರುವ ಒಂದೇ ಎಡೆಯಲ್ಲಿ ಕಲ್ಪಿಸುವದು ಸಂಘರ್ಷಕ್ಕೆ ಕಾರಣವೆಂದು ಕೇಳಿಬಂತು. ಈ ಬಗ್ಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಮೂಲಭೂತ ಸೌಕರ್ಯಗಳನ್ನು ರೂಪಿಸಲು ನಿರ್ದೇಶನ ದೊರೆಯಿತು.

ಸಂಗಮ ಸ್ನಾನಕ್ಕೆ ಆದ್ಯತೆ : ತಲಕಾವೇರಿ ಬರುವ ಮುನ್ನ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಸ್ನಾನ ಇತ್ಯಾದಿ ಪೂರೈಸಿ, ಪಿತೃಕಾರ್ಯಗಳನ್ನು ನೆರವೇರಿಸಿಕೊಂಡು ಬಳಿಕ ಕಾವೇರಿಯ ದರ್ಶನಕ್ಕಾಗಿ ತೆರಳುವದರೊಂದಿಗೆ ಶ್ರೀ ಮಹಾಗಣಪತಿ, ಅಗಸ್ತ್ಯೇಶ್ವರ ಸನ್ನಿಧಿ ಸಂದರ್ಶಿಸಿ ಬ್ರಹ್ಮ ಕುಂಡಿಕೆ ಮೂಲಕ ಜಲದೇವತೆ ಕಾವೇರಿಯ ದರ್ಶನ, ತೀರ್ಥ ಸ್ವೀಕಾರ ಮಾಡುವದು ಪ್ರಾಶಸ್ತ್ಯವೆಂದು ಕಂಡು ಬಂತು. ತಲಕಾವೇರಿ ನೀರಿನ ಪ್ರೋಕ್ಷಣೆ ಶ್ರೇಷ್ಠವೆಂಬ ವ್ಯಾಖ್ಯಾನ ಲಭಿಸಿತು.

ಭಾಗಮಂಡಲ ಸಂಗಮ ಸ್ನಾನದ ಹೊರತಾಗಿ ಕೇವಲ ತಲಕಾವೇರಿ ಕೊಳದ ಸ್ನಾನ ಶುಭಕರವಲ್ಲವೆಂದು ದೈವಜ್ಞರು ಸ್ಪಷ್ಟೋಕ್ತಿಯಾಡಿದರು. ಈ ನಿಯಮವು ಪಾಲನೆಯಾಗದೆ ಪ್ರವಾಸಿಗರು ನೇರವಾಗಿ ತಲಕಾವೇರಿಯಲ್ಲಿ ಸ್ನಾನ ಮಾಡುವದರಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿ ಹಲವು ದೋಷಗಳಿಗೆ ಅನುವು ಮಾಡಿಕೊಟ್ಟಂತಾಗಿದೆ ಎಂಬ ಅಂಶ ಪ್ರಶ್ನೆಯಲ್ಲಿ ಗೋಚರಿಸಿತು.

ಯುದ್ಧ ಸನ್ನದ್ಧ ಸ್ಥಿತಿ : ತಲಕಾವೇರಿ ಸನ್ನಿಧಿ ನಿತ್ಯ ಪೂಜೆಗಳು, ನೈವೇದ್ಯ, ಪ್ರವಾಸಿಗರ ದುರ್ವರ್ತನೆಗಳಿಂದ ದೈವ ಚೈತನ್ಯ ಕ್ಷೀಣಿಸುತ್ತಾ, ಅರ್ಚಕ ಕುಟುಂಬಗಳಲ್ಲಿ ಒಳಿತಿನ ಚಿಂತನೆಯೊಂದಿಗೆ ಶಾಂತ ಸ್ವಭಾವ ಮರೆಯಾಗಿ, ಸ್ವಜನರಲ್ಲಿ ಯುದ್ಧ ಸನ್ನದ್ಧ ಸ್ಥಿತಿಯೊಂದಿಗೆ ದ್ವೇಷಕ್ಕೆ ಕಾರಣವಾಗಿದೆ ಎಂದು ಪ್ರಶ್ನೆಫಲ ಎದುರಾಯಿತು.

ಅನೇಕ ವರ್ಷದ ಹಿಂದೆ ಕ್ಷೇತ್ರದಲ್ಲಿ ಅನ್ನದಾನದಲ್ಲಿ ತೊಡಗಿದ್ದ ಅರ್ಚಕ ಬಂಧುವೊಬ್ಬರ ಹತ್ಯೆ, ಪಿತೃ ಸಮಾನ ಹಿರಿಯ ಅರ್ಚಕರಿಗೆ ಕಿರಿಯರಿಂದ ಹಲ್ಲೆ, ಶಾಪದೋಷದಿಂದ ಸಾವು-ನೋವು ಎದುರಾಗಿದ್ದು, ಸನ್ನಿಧಿಯ ಚೈತನ್ಯಕ್ಕೆ ಕಳಂಕವೆಂಬ ವಿಮರ್ಶೆಯು ಪ್ರಶ್ನೆಫಲದಿಂದ ಕಾಣಬರುವದರೊಂದಿಗೆ ಇಂಥ ದೋಷ ಪರಿಹಾರ ಅವಶ್ಯಕವೆಂದು ಭವಿಷ್ಯ ನುಡಿಯಲಾಯಿತು.

ಮರು ವ್ಯವಸ್ಥೆ ಅವಶ್ಯಕ : ಕ್ಷೇತ್ರದಲ್ಲಿ ಈಗಿರುವ ದೋಷಬಾಧೆಗಳನ್ನು ನಿವೃತ್ತಿಗೊಳಿಸುವ ಮೂಲಕ ಆಡಳಿತ ವರ್ಗ, ಅರ್ಚಕ ಕುಟುಂಬಗಳು, ನೌಕರರ ವರ್ಗ, ತಕ್ಕಮುಖ್ಯಸ್ಥರು ಪರಸ್ಪರ ವಿಶ್ವಾಸ, ನಂಬಿಕೆಯಿಂದ ನಡೆದುಕೊಂಡರೆ ಭವಿಷ್ಯದಲ್ಲಿ ಕ್ಷೇತ್ರವು ಗತವೈಭವ ಕಾಣಲಿದೆ ಎಂಬ ಶುಭಕಾರಕ ಲಕ್ಷಣ ಪ್ರಾಪ್ತವಾಯಿತು.

ಕಾಕ ಕೂಜನ ಫಲ : ಅಷ್ಟಮಂಗಲ ಪ್ರಶ್ನೆಗೆ ಚಾಲನೆ ದೊರೆತ ಬೆನ್ನಲ್ಲೇ ತಲಕಾವೇರಿ ಕ್ಷೇತ್ರದಲ್ಲಿ ನಿತ್ಯ ಕೇಳಿ ಬರುತ್ತಿರುವ ಕಾಕ ಕೂಜನ (ಕಾಗೆಗಳ ಕರ್ಕಷ ಕೂಗು) ಫಲವು ತಲಕಾವೇರಿ-ಭಾಗಮಂಡಲ ಸನ್ನಿಧಿಯೊಂದಿಗೆ ಕಾವೇರಿ ತೀರ್ಥವು ಪಿತೃಕಾರಕ ಸೇವೆಗಳಿಗೆ ಪ್ರಾಶಸ್ತ್ಯವುಳ್ಳದ್ದು ಎಂಬ ಆಶಯ ವ್ಯಕ್ತವಾಯಿತು. ಹಾಗಾಗಿ ತಮ್ಮ ಪೂರ್ವಜರಿಗೆ ಭಾಗಮಂಡಲದಲ್ಲಿ ಪಿತೃ ಕಾರ್ಯ ನಡೆಸಿ, ತಲಕಾವೇರಿ ಕ್ಷೇತ್ರ ಸಂದರ್ಶಿಸಿ ತೀರ್ಥ ಪ್ರೋಕ್ಷಣೆ - ತೀರ್ಥಪಾನ (ಸೇವನೆ) ಮಾಡುವದು ಪೂರ್ವಕಾಲದಿಂದ ನಡೆದು ಬಂದಿದೆ ಎಂದು ನೆನಪಿಸಲಾಯಿತು. ಅಗಸ್ತ್ಯ ಕಮಂಡಲುವಿನಿಂದ ಶ್ರೀ ಗಣೇಶ ಕಾಗೆಯ ರೂಪದಲ್ಲಿ ನೀರು ಹೊರ ಚೆಲ್ಲುವಲ್ಲಿ ಘಟಿಸಿದ ಪುರಾಣ ಪ್ರಸಂಗ ಇಲ್ಲಿ ಉಲ್ಲೇಖಿಸಲ್ಪಟ್ಟಿತು.

ಇಂದು ಮುಂದುವರಿಕೆ : ಅಷ್ಟಮಂಗಲ ಪ್ರಶ್ನೆಯು ತಾ. 25ರಂದು (ಇಂದು) ಮುಂದುವರಿಯಲಿದೆ. ದೈವಜ್ಞರು, ಕ್ಷೇತ್ರ ತಂತ್ರಿಗಳು, ಅರ್ಚಕ ಕುಟುಂಬ, ಆಡಳಿತ ಮಂಡಳಿ, ಅಧಿಕಾರಿ ವರ್ಗ ಸೇರಿದಂತೆ ಭಕ್ತ ಜನರು ವಿವಿಧೆಡೆಗಳಿಂದ ಪಾಲ್ಗೊಂಡಿದ್ದರು.