ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಮೇ 23 : ಕಾಂಗ್ರೆಸ್ ನಲ್ಲಿ ಅಸಮಾಧಾನ ಹೊಂದಿರುವ ಶಾಸಕರು ಬಿಜೆಪಿಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಜನಮತ ವಿರೋಧಿ ದಿನ ಆಚರಣೆಯ ನೇತೃತ್ವವನ್ನು ವಹಿಸಿ ಮಾತನಾಡಿದರು. ರಾಜ್ಯದ ಜನತೆ ಬಿಜೆಪಿ ಪರವಾಗಿ ತೀರ್ಪು ನೀಡಿದ್ದಾರೆ. ಆದರೆ ಅಧಿಕಾರ ಪಡೆಯುವ ಒಂದೇ ಉದ್ದೇಶದಿಂದ ಇಂದು ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಈ ಬಗ್ಗೆ ಆ ಪಕ್ಷಗಳ ಕೆಲವು ಶಾಸಕರಿಗೆ ಅಸಮಾಧಾನಗಳಿವೆ. ಹೀಗಾಗಿ ಯಾವ ಶಾಸಕರಿಗೆ ಅಸಮಾಧಾನವಿದೆಯೋ ಅವರು ಬಿಜೆಪಿಗೆ ಬನ್ನಿ, ಸುಭದ್ರ ಸರ್ಕಾರವನ್ನು ರಚಿಸಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡೋಣ ಎಂದು ಕರೆ ನೀಡಿದರು. ರೈತರ ಸಾಲದ ಜೊತೆಗೆ ಖಾಸಗಿ ಸಾಲವನ್ನೂ ಮನ್ನಾ ಮಾಡುವದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ, ರಾಜ್ಯ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಕೂಡ ಎಚ್ಚರಿಕೆ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಈ ದಿನ ರಾಜ್ಯಕ್ಕೇ ಕರಾಳ ದಿನ. ಹೀಗಾಗಿ ಕಪ್ಪು ಪಟ್ಟಿ ಧರಿಸಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಯುದ್ಧ ಪರಿಸ್ಥಿತಿ
ಜಮ್ಮು, ಮೇ 23 : ಜಮ್ಮು-ಕಾಶ್ಮೀರದಲ್ಲಿ ಪಾಕ್ ಪುಂಡಾಟ ಮುಂದುವರೆದಿದ್ದು, ಗುಂಡಿನ ಧಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಗಡಿ ಪ್ರದೇಶದಲ್ಲಿ ಯುದ್ಧ ರೀತಿಯ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶದ ಭಾಗವಾಗಿರುವ ಜಮ್ಮು, ಸಾಂಬ, ಕಥುವಾ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದ 40,000 ಜನರನ್ನು ಸ್ಥಳಾಂತರಿಸಲಾಗಿದೆ. ಕೆಲವರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದರೆ, ಹಲವರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮೇ 23ರಂದು ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ನಿರತವಾಗಿದ್ದು, ಬಿಎಸ್ ಎಫ್ ಯೋಧರು ಪ್ರತಿ ಧಾಳಿ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ತಾ. 22 ರಂದು ಆರ್ ಪುರ ಹಾಗೂ ರಾಮ್ ಘರ್ ಸೆಕ್ಟರ್‍ಗಳಲ್ಲಿ ಪಾಕಿಸ್ತಾನ ಶೆಲ್ಲಿಂಗ್ ನಡೆಸಿತ್ತು.
ಮತ್ತೆ ನಡೆದ ಗೋಲಿಬಾರ್‍ಗೆ 1 ಬಲಿ
ಚೆನ್ನೈ, ಮೇ 23 : ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದಿದ್ದು ಇಂದು ನಡೆದ ಪೆÇಲೀಸರ ಗೋಲಿಬಾರ್ ನಲ್ಲಿ ಓರ್ವ ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿವೆ. ತೂತುಕೂಡಿಯ ಅಣ್ಣಾ ನಗರದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರು ಎರಡು ಪೆÇಲೀಸ್ ವ್ಯಾನ್ ಗಳಿಗೆ ಬೆಂಕಿ ಹಚ್ಚಿದ್ದು ಈ ವೇಳೆ ಪೆÇಲೀಸರು ಗೋಲಿಬಾರ್ ಮಾಡಿದ್ದಾರೆ. ಈ ವೇಳೆ ಓರ್ವ ಮೃತಪಟ್ಟಿದ್ದು ನಾಲ್ವರಿಗೆ ಗಂಭೀರ ಗಾಯವಾಗಿದೆ. ಪೆÇಲೀಸರು ಗೋಲಿಬಾರ್ ಮಾಡಿದ್ದ ಪರಿಣಾಮ 11 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಈಗ ಕೇಂದ್ರ ಗೃಹ ಇಲಾಖೆ ವರದಿ ಕೇಳಿದೆ. ಪೆÇಲೀಸರ ಕ್ರಮದಿಂದಾಗಿ 9 ಜನರು ಮೃತಪಟ್ಟಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಪೆÇಲೀಸರ ಕ್ರಮಕ್ಕೂ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೆÇಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಡಿಜಿಪಿ, ಎಸ್ ಪಿ, ಜಿಲ್ಲಾಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ರಾಜಕೀಯ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಹ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ನೋಟಿಸ್ ಜಾರಿಗೊಳಿಸಿದರೆ, ಮದ್ರಾಸ್ ಹೈಕೋರ್ಟ್ ಸ್ಟೆರ್ಲೈಟ್ ಕಂಪನಿಯಿಂದ ನಿರ್ಮಾಣವಾಗುತ್ತಿದ್ದ ಹೊಸ ಕಾಮಗಾರಿಗೆ ತಡೆ ನೀಡಿದೆ.
ಉದ್ಯಮಿಯಿಂದ ಪತ್ನಿ, ಮಕ್ಕಳ ಹತ್ಯೆ
ಅಹಮದಾಬಾದ್, ಮೇ 23 : ಹಿರಿಯ ಮಗಳನ್ನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಗಲಾಟೆ ನಡೆದ ನಂತರ ಗುಜರಾತಿನ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಧರ್ಮೇಶ್ ಶಾ, ಹತ್ಯೆ ಮಾಡಿದ್ದ ಆರೋಪಿ. 50 ವರ್ಷದ ಈತ ಕಟ್ಟಡ ನಿರ್ಮಾಣ ವ್ಯವಹಾರ ಮಾಡುತ್ತಿದ್ದು, ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೆÇಲೀಸರು ಹೇಳಿದ್ದಾರೆ. ಹಿರಿಯ ಮಗಳನ್ನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳುಹಿಸಲು 70 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ತನ್ನನ್ನು ನಿಂದಿಸಲಾಯಿತು ಎಂದು ಆತ ಪೆÇಲೀಸರಿಗೆ ತಿಳಿಸಿದ್ದಾನೆ. ನಂತರ ನಿದ್ರೆ ಮಾಡುವ ಸಂದರ್ಭದಲ್ಲಿ ಮೊದಲಿಗೆ ಆತನ ಹೆಂಡತಿ ಅಮಿಬೇನ್ ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಬಳಿಕ ಪುತ್ರಿಯರಾದ ಹೆಲಿ, ಖುಷಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ತನ್ನ ಪತ್ನಿಯ ಮೇಲೆ ಒಂದು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದ್ದು, ಮಕ್ಕಳ ಮೇಲೆ ಎರಡೆರಡು ಬಾರಿ ಗುಂಡು ಹಾರಿಸಲಾಗಿದೆ ಎಂದು ಎಸಿಪಿ ಎಸ್ ಎನ್ ಜಲಾ ತಿಳಿಸಿದ್ದಾರೆ.
ಬ್ಯಾಂಕ್‍ಗಳಿಗೆ 83,000 ಕೋಟಿ ರೂ. ಮರುಪಾವತಿ
ನವದೆಹಲಿ, ಮೇ 23 : ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪರಿಣಾಮಕ್ಕೆ ಹೆದರಿದ ವಿವಿಧ ಕಂಪನಿಗಳ ಪ್ರವರ್ತಕರು ತಾವು ಬಾಕಿ ಉಳಿಸಿಕೊಂಡಿದ್ದ 83,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದಾರೆ. ಕೇಂದ್ರ ಸರ್ಕಾರ ನಡೆಗೆ ಹೆದರಿದ ಸುಮಾರು 2100ಕ್ಕೂ ಹೆಚ್ಚು ಕಂಪನಿಗಳು 83 ಸಾವಿರ ಕೋಟಿ ರುಪಾಯಿ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿವೆ. ಕಾಪೆರ್Çೀರೇಟ್ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 2100ಕ್ಕೂ ಹೆಚ್ಚು ಕಂಪನಿಗಳು ಹಳೆಯ ಬ್ಯಾಂಕ್ ಬಾಕಿಯನ್ನು ಪಾವತಿಸಿವೆ. ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪ್ರಕಾರ 90 ದಿನಗಳ ಕಾಲ ಪಾವತಿಯಾಗದೆ ಉಳಿದ ಸಾಲವನ್ನು ಅನುತ್ಪಾದಕ ಸ್ವತ್ತು ಎಂದು ವರ್ಗಿಕರಿಸಲಾಗುತ್ತದೆ. ನಂತರ ಮಾಲೀಕರು ಅಥವಾ ಹೂಡಿಕೆದಾರರು ಕಂಪನಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ.
ಮದರಸಾಗಳಲ್ಲಿ ಎನ್ ಸಿಆರ್ ಟಿ ಪಠ್ಯಕ್ರಮ
ಲಖನೌ, ಮೇ 23 : ಮದರಸಾಗಳಲ್ಲಿ ಎನ್ ಸಿಆರ್ ಟಿ ಪಠ್ಯಕ್ರಮ ಪರಿಚಯಿಸಲು ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಉರ್ದು, ಹಿಂದಿ, ಆಂಗ್ಲ ಭಾಷೆಗಳಲ್ಲಿ ಎನ್ ಸಿ ಆರ್ ಟಿ ಪಠ್ಯವಿರಲಿದ್ದು, ಮದರಸಾದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮವಾದ ತರಬೇತಿ ಹಾಗೂ ಕೌಶಲ್ಯತೆಯನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ಕೆಲವು ಮೂಲಗಳ ಪ್ರಕಾರ ಮದರಸಾಗಳಿಗೆ ಎನ್ ಸಿಇಆರ್ ಟಿ ಪಠ್ಯಕ್ರಮವನ್ನೇ ಅನುಸರಿಸಲು ಸೂಚನೆ ನೀಡಲಾಗಿದ್ದು ಗಣಿತ, ಸಮಾಜ ವಿಜ್ಞಾನ ವಿಷಯಗಳನ್ನು ಮದರಸಾಗಳಲ್ಲಿ ಬೋಧನೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ಉಗ್ರರಿಂದ ಗ್ರೆನೇಡ್ ಧಾಳಿ
ಅನಂತ್‍ನಾಗ್, ಮೇ 23 : ಜಮ್ಮು ಮತ್ತು ಕಾಶ್ಮೀರದ ಅನಂತ್’ನಾಗ್ ಜಿಲ್ಲೆಯಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ದಾಳಿಯಲ್ಲಿ 6 ನಾಗರೀಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಅನಂತ್ ನಾಗ್ ಜಿಲ್ಲೆಯ ಬಿಜ್ಬೆಹರ ಎಂಬ ಪ್ರದೇಶದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಗ್ರೆನೇಡ್ ದಾಳಿಯಲ್ಲಿ ಗಾಯಗೊಂಡ ನಾಗರೀಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಉಗ್ರರಿಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದಾರೆಂದು ವರದಿಗಳು ತಿಳಿಸಿವೆ.