ನಾಪೋಕ್ಲು, ಮೇ 22: ಕಾಡಾನೆ ಹಾವಳಿಯಿಂದ ನಿರಂತರವಾಗಿ ಗ್ರಾಮಸ್ಥರು ತೊಂದರೆಗೊಳಗಾಗುತ್ತಿದ್ದು ಶಾಶ್ವತ ತಡೆಗೆ ಕ್ರಮಕೈಗೊಳ್ಳಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ. ಇಲ್ಲಿಗೆ ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಹಾಗೂ ಮರಂದೋಡ ಗ್ರಾಮಸ್ಥರು ನಿರಂತರ ಕಾಡಾನೆ ಹಾವಳಿಯಿಂದ ನಷ್ಟಕ್ಕೊಳಗಾಗಿರು ವದಲ್ಲದೆ ಭಯದಿಂದ ಜೀವನ ನಡೆಸುವಂತಾಗಿದೆ.

ಈ ಮೊದಲು ವರ್ಷಕ್ಕೆ ಒಂದೆರಡು ಕಾಡಾನೆಗಳು ಲಗ್ಗೆ ಇಡುತ್ತಿದ್ದವು. ಇತ್ತೀಚೆಗೆ ಸುತ್ತಮುತ್ತಲ ಪರಿಸರದಲ್ಲಿ ನಾಲ್ಕೈದು ಕಾಡಾನೆಗಳ ಹಿಂಡು ಹಗಲು ರಾತ್ರಿ ಎನ್ನದೆ ಧಾಳಿ ಇಡುತ್ತಿವೆ. ಹಗಲಿನಲ್ಲೂ ಕಾಡಾನೆಗಳು ಕಂಡು ಬರುತ್ತಿದ್ದು, ಗ್ರಾಮದ ಜನರು ಭಯಭೀತಿಯಿಂದ ಸಂಚರಿಸು ವಂತಾಗಿದೆ. ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಇಲಾಖೆ ಕ್ರಮಕೈಗೊಂಡು ಶಾಶ್ವತ ಪರಿಹಾರ ನೀಡುವಂತಾಗಬೇಕು ಎಂದು ಗ್ರಾಮಸ್ಥ ಬಡಕ್ಕಡ ಸುರೇಶ್ ಮತ್ತಿತರರು ಒತ್ತಾಯಿಸಿದ್ದಾರೆ.