ಮಡಿಕೇರಿ, ಮೇ 22: ಕಮಲೇಶ್ ಚಂದ್ರ ವರದಿ ಆಧಾರದಲ್ಲಿ 7ನೇ ವೇತನ ಆಯೋಗದ ಸವಲತ್ತುಗಳನ್ನು ಪಾವತಿ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಮೂಲಕ ಗ್ರಾಮೀಣ ಅಂಚೆ ಸೇವಕರು ಇಂದಿನಿಂದ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಕಮಲೇಶ್ ಚಂದ್ರ ವರದಿ ಇಲಾಖೆಗೆ ಸಲ್ಲಿಕೆಯಾಗಿ 16 ತಿಂಗಳು ಕಳೆದರೂ ಇಲಾಖೆಯಾಗಲಿ, ಕೇಂದ್ರ ಸರಕಾರವಾಗಲಿ ಯಾವದೇ ಕ್ರಮ ಕೈಗೊಂಡಿಲ್ಲ. 7ನೇ ವೇತನ ಆಯೋಗದ ಸವಲತ್ತುಗಳನ್ನು ನೀಡಿ ಒಂದು ವರ್ಷ ಕಳೆದಿದೆ. ಕೂಡಲೇ ಇದನ್ನು ಪರಿಗಣಿಸಬೇಕೆಂದು ನಿಗದಿತ ಗುರಿ ಹೆಸರಿನಲ್ಲಿ ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು, 8 ಗಂಟೆ ಕೆಲಸದೊಂದಿಗೆ ಹುದ್ದೆ ಖಾಯಂಗೊಳಿಸಿಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಅಂಚೆ ಸೇವಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.