ಸೋಮವಾರಪೇಟೆ, ಮೇ 22: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಂದಕದೊಳಗೆ ನುಗ್ಗಿದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಪೂರ್ವಾಹ್ನ ಸಂಭವಿಸಿದೆ.

ಶನಿವಾರಸಂತೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ತೇಜ (32) ಎಂಬವರೇ ಸಾವನ್ನಪ್ಪಿದವರಾಗಿದ್ದು, ಇಂದು ಬೆಳಿಗ್ಗೆ ಗರಗಂದೂರು ಗ್ರಾಮದ ಪತ್ನಿಯ ಮನೆಯಿಂದ ಶನಿವಾರಸಂತೆಗೆ ತೆರಳುವ ಸಂದರ್ಭ ಇಲ್ಲಿನ ಬೀರೇಬೆಟ್ಟ ಬಳಿ ಅವಘಡ ಸಂಭವಿಸಿದೆ.

ನಿನ್ನೆ ರಾತ್ರಿ ಮಂಗಳೂರಿನಿಂದ ಗರಗಂದೂರಿಗೆ ಆಗಮಿಸಿ, ಪತ್ನಿ ಮನೆಯಲ್ಲಿ ತಂಗಿದ್ದ ತೇಜ ಅವರು ಇಂದು ಬೆಳಿಗ್ಗೆ ಗ್ಯಾರೇಜ್‍ಗೆ ತಮ್ಮ ಮಾರುತಿ ಓಮ್ನಿ ಕಾರಿನಲ್ಲಿ ತೆರಳುತ್ತಿದ್ದರು. ಮನೆಯಿಂದ ತೆರಳುವ ಸಂದರ್ಭ ಎದೆನೋವು ಎಂದು ಹೇಳಿದ್ದ ತೇಜ ಅವರು ವಾಹನ ಚಾಲನೆ ಮಾಡುವ ಸಂದರ್ಭದಲ್ಲೇ ಹೃದಯಾಘಾತವಾಗಿ, ಕಾರಿನ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸಿದೆ ಎಂದು ಸಂಶಯಿಸ ಲಾಗಿದ್ದು, ಮರಣೋತ್ತರ ಪರೀಕ್ಷೆಯ ಪೂರ್ಣ ವರದಿ ನಂತರ ಘಟನೆಗೆ ನಿಜ ಕಾರಣ ತಿಳಿಯಲಿದೆ ಎಂದು ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ ತಿಳಿಸಿದ್ದಾರೆ.

ಪತ್ನಿ ಸೇರಿದಂತೆ ಒಂದು ತಿಂಗಳ ಮಗುವನ್ನು ಅಗಲಿರುವ ತೇಜ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಎಎಸ್‍ಐ ಪುಟ್ಟಪ್ಪ, ಮುಖ್ಯಪೇದೆ ಮೋಹನ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.