ನಾಪೋಕ್ಲು, ಮೇ 22: ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ಜನಾಂಗ ಬಾಂಧವರಿಗಾಗಿ ಭಾಗಮಂಡಲದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಯ್ಯಂಗೇರಿ ಎ ತಂಡ ಪ್ರಶಸ್ತಿ ಗಳಿಸಿತು.ಪೊನ್ನುಕಂಡ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.

ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಗೊಲ್ಲ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಕಡವಡೀರ ಸಂತೋಷ್ ಹಾಗೂ ಉಪಾಧ್ಯಕ್ಷ ಅರೆಯಂಡ ಕುಶಾಲಪ್ಪ ನೆರವೇರಿಸಿದರು.ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲಾ ಗೊಲ್ಲ ಸಮಾಜದ (ಮೊದಲ ಪುಟದಿಂದ) ಅಧ್ಯಕ್ಷ ಆಚಿರ ಎಸ್.ನಾಣಯ್ಯ ಹಾಗೂ ಉಪಾಧ್ಯಕ್ಷೆ ಪೊನ್ನುಕಂಡ ಚಿತ್ರಾ ಮೊಣ್ಣಪ್ಪ ಉದ್ಘಾಟಿಸಿದರು. ಕ್ರೀಡಾಕೂಟದಲ್ಲಿ ಜನಾಂಗ ಬಾಂಧವರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.

ಫೈನಲ್ ಪಂದ್ಯಾಟವನ್ನು ಅಹಿಂದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸಿ ಮಾತನಾಡಿ ಜನಾಂಗದವರು ಒಗ್ಗೂಡಲು ಸಹಕಾರಿಯಾಗುವಂತ ಇಂತಹ ಕ್ರೀಡಾಕೂಟಗಳನ್ನು ನಡೆಸಬೇಕು ಎಂದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಜೀವನದಲ್ಲಿ ಮುಂದೆ ಬರುವಂತೆ ಕರೆ ನೀಡಿದರು. ಕ್ರಿಕೆಟ್ ಪಂದ್ಯಾಟದಲ್ಲಿ ಪುಲಿಕೋಟಿನ ಪೊನ್ನುಕಂಡ ತಂಡವು ನಿಗದಿತ ಆರು ಓವರ್‍ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತು. ಅಯ್ಯಂಗೇರಿ ಎ ತಂಡವು ಪೊನ್ನುಕಂಡ ತಂಡದ ವಿರುದ್ಧ ಜಯಗಳಿಸಿತು. ಪಂದ್ಯಪುರುಷ ಪ್ರಶಸ್ತಿಯನ್ನು ತೊತ್ತಿಯಂಡ ಕಿರಣ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪೊನ್ನುಕಂಡ ವಿನೇಶ್ ಪಡೆದರು. ಅಯ್ಯಂಗೇರಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಚಿತ್ರನಾಗೇಶ್, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ರಾಜೀವ್, ದೊಡ್ಡಪುಲಿಕೋಟಿನ ಕಾಫಿ ಬೆಳೆಗಾರ ಕರವಂಡ ಸುರೇಶ್ ತಿಮ್ಮಯ್ಯ, ಅಯ್ಯಂಗೇರಿಯ ಆಚೀರ ಗೋಪಾಲ ಪಾಲ್ಗೊಂಡಿದ್ದರು. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ಜರುಗಿದವು. -ದುಗ್ಗಳ ಸದಾನಂದ