ಮಡಿಕೇರಿ, ಮೇ 21: ನಿಪಾಹ್ ಎಂಬ ವೈರಸ್ ಸೋಂಕು ಕೇರಳದಲ್ಲಿ ಸುಮಾರು 9 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಕೇರಳ ರಾಜ್ಯಾದ್ಯಂತ ಈ ಬಗ್ಗೆ ಜನರು ಜಾಗೃತರಾಗುವಂತೆ ಆರೋಗ್ಯ ಇಲಾಖೆ ಘೋಷಣೆ ಹೊರಡಿಸಿದೆ. ಕರ್ನಾಟಕದಲ್ಲಿಯೂ ಈ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇದೇ ರೀತಿ ಕೊಡಗಿನಲ್ಲಿಯೂ ಕೂಡ ನಿಪಾಹ್ ವೈರಸ್ ಬರುವ ಮುನ್ನವೇ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕೈಗೊಂಡಿದೆ.
ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರು ಜಿಲ್ಲೆಯ ಜನರು ಈ ವೈರಸ್‍ನ ಕುರಿತು ಆತಂಕ ಅಥವಾ ಭಯಪಡಬೇಕಾಗಿಲ್ಲ. ಏಕೆಂದರೆ ಈ ರೋಗ ಕೊಡಗಿಗೆ ಇನ್ನೂ ಸುಳಿದಿಲ್ಲ. ಆದರೂ ಕೊಡಗು ಕೇರಳ ಗಡಿ ಪ್ರದೇಶದಿಂದ ಸೋಂಕು ತಗಲಬಹುದಾದ ಸಾಧ್ಯತೆ ಇರುವದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಪರೀತ ಜ್ವರ, ಕೆಮ್ಮು, ಮೈಕೈ ನೋವು ಎರಡು ಮೂರು ದಿನಗಳವರೆಗೆ ಬಿಡದೇ ಬಾಧಿಸಿದರೆ ಅಂತವರು ಜಿಲ್ಲಾ ಆಸ್ಪತ್ರೆಯಲ್ಲಿ (ಮೊದಲ ಪುಟದಿಂದ) ತಪಾಸಣೆಗೆ ಒಳಪಡುವದು ಸೂಕ್ತ. ಅಂತಹ ಸೋಂಕಿನ ಕುರಿತು ಸುಳಿವು ಗೊತ್ತಾದರೆ ಸುಮಾರು ಐದಾರು ಹಾಸಿಗೆಯುಳ್ಳ ಪ್ರತ್ಯೇಕ ಕೊಠಡಿಯಲ್ಲಿ ಬಿಕಿತ್ಸೆಗೆ ಒಳಪಡಿಸಲಾಗುವದು ಎಂದು ಅವರು ತಿಳಿಸಿದರು.
ಶೀತ, ನೆಗಡಿ ಆದಾಗ ಮುನ್ನೆಚ್ಚರಿಕೆ ಕ್ರಮವಾಗಿ ಪಸರಿಸದಂತೆ ಕರ್ಚೀಫ್ ಬಳಕೆ ಮಾಡಿ ಆದರೆ ಮಾನಸಿಕವಾಗಿ ತಮಗೆ ಈ ವೈರಸ್ ಬಂದಿದೆ ಎನ್ನುವ ಅನವಶ್ಯಕ ಆತಂಕಕ್ಕೆ ಒಳಗಾಗುವದು ಬೇಡ ಎಂದು ಡಾ. ರಾಜೇಶ್ ಸಲಹೆಯಿತ್ತಿದ್ದಾರೆ.
ವಾರಾಂತ್ಯದಲ್ಲಿ ಕೇರಳದಿಂದಲೂ ಅಧಿಕ ಪ್ರವಾಸಿಗರು ವಿವಿಧ ಗಡಿ ಪ್ರದೇಶಗಳಿಂದ ಆಗಮಿಸುತ್ತಾರೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವದು ಅಸಾಧ್ಯ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣ ಕಂಡು ಬಂದೊಡನೆ ಜಿಲ್ಲೆಯ ಜನರು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿಕೊಳ್ಳಲಿ ಎಂದು ಅವರು ಕಿವಿಮಾತು ಹೇಳಿದರು.
ರೋಗ ಬರುವದು ಹೇಗೆ?
ಕೇರಳದಲ್ಲಿ ಈ ರೋಗ ಬರಲು ಅಲ್ಲಿನ ಆರೋಗ್ಯಾಧಿಕಾರಿಗಳು ನೀಡಿರುವ ಕಾರಣ ಹೀಗಿದೆ; ಪ್ರಾಣಿ ಪಕ್ಷಿಗಳು ಬಾವಲಿಗಳಿಂದ ಈ ಜ್ವರ ವೈರಸ್ ಮೂಲಕ ತಗಲುತ್ತದೆ. ಪ್ರಾಣಿ ಪಕ್ಷಿಗಳು ತಿಂದ ಹಣ್ಣು ಹಂಪಲುಗಳನ್ನು ಕೂಡ ಸೇವಿಸಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.