ಗೋಣಿಕೊಪ್ಪ ವರದಿ, ಮೇ 21 : ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯ ಹವಾಗುಣ ಉತ್ತಮವಾಗಿದೆ ಬೆಳೆಗಾರರರು ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹೇಳಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ವಿಶ್ವ ಜೇನು ನೊಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯ ಬೆಳೆಯಾಗಿ ಕಾಫಿ, ಕಾಳುಮೆಣಸನ್ನು ಬೆಳೆಯಲಾಗುತ್ತಿದೆ ಆದರೆ ಜೇನು ನೊಣ ಸಾಕಾಣಿಕೆಯಂತಹ ಮಿಶ್ರ ಕೃಷಿಯನ್ನು ಅಳವಡಿಸಿ ಕೊಳ್ಳುವದರಿಂದ ಆದಾಯವನ್ನು ಆಧಿಕಗೊಳಿಸಿ ಕೊಳ್ಳಬಹುದು ಮತ್ತು ಇತರ ಇಲಾಖೆಗಳಿಂದ ಬೆಳಗಾರರಿಗೆ ಉತ್ತಮ ಮಾಹಿತಿ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಜೇನು ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಆದರೆ ಬೇರೆ ಜಿಲ್ಲೆಗಳಲ್ಲಿ ಕೊಡಗಿನ ಜೇನು ಎಂದು ಕಳಪೆ ಗುಣಮಟ್ಟದ ಜೇನಿನ ಮಾರಾಟದಿಂದ ಇಲ್ಲಿನ ಮಾರುಕಟ್ಟೆ ಬೆಲೆ ಕುಸಿತಗೊಳ್ಳುವ ಸಾಧ್ಯತೆಯಿದೆ ಎಂದು ಬೆಳೆಗಾರ ಬೋಸ್ ಮಂದಣ್ಣ ಆತಂಕ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಕೆಂಚಾರೆಡ್ಡಿ ತಾಂತ್ರಿಕ ಅದಿವೇಶನ ಮತ್ತು ಬೆಳೆಗಾರರ ಜೊತೆ ಸಂವಾದ ನಡೆಸಿದರು. ಜೇನು ಸಾಕಾಣಿಕ ಮತ್ತು ಅದರ ನಿರ್ವಹಣೆ ಅದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವದರ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸಿದರು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಡಿಡಿಎಂ ಎಂ. ಸಿ ನಾಣಯ್ಯ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಗೌರವ್ ಶೆಟ್ಟಿ, ಪುತ್ತರಿ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕ ಮನಿಯಪಂಡ ಸೋಮಯ್ಯ ಇದ್ದರು.