ಸೋಮವಾರಪೇಟೆ,ಮೇ.21: ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಕೆಲ ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡು, ಕಾಮಗಾರಿಯನ್ನು ಪೂರ್ಣಗೊಳಿಸದೇ ಲಕ್ಷಾಂತರ ಹಣ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಇಂದು ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಸರ್ಕಾರ ಸಂಬಳ ನೀಡೋದು ನಿಯತ್ತಾಗಿ ಕೆಲಸ ಮಾಡೋಕೆ; ಅದು ಆಗಲ್ಲ ಅಂದ್ರೆ ದನ ಕಾಯೋಕೆ ಹೋಗಿ’ ಎಂಬ ತೀಕ್ಷ್ಣ ಮಾತುಗಳ ಮೂಲಕ ಇಲಾಖಾ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ರಲ್ಲದೇ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‍ಕುಮಾರ್ ನೇತೃತ್ವದಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಅಭಿಯಂತರರುಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು. ನಿರ್ವಹಣಾ ವೆಚ್ಚವೆಂದು ಬಿಡುಗಡೆಯಾಗುವ ಹಣದಲ್ಲಿ ಶೇ.80 ಪಾಲು ಖರ್ಚು ತೋರಿಸಲಾಗಿದೆ. ಕೆಲಸವನ್ನು ಪೂರ್ಣಗೊಳಿಸದೇ ಇದ್ದರೂ ಸಹ ಗುತ್ತಿಗೆದಾರರಿಗೆ ಬಿಲ್ ಕೊಟ್ಟಿದ್ದಾರೆ ಎಂದು ದೂರಿದರು.

ಜಿಲ್ಲಾ ಮತ್ತು ಇತರ ರಸ್ತೆಗಳ ನಿರ್ವಹಣೆ ಅಡಿಯಲ್ಲಿ ಹಾನಗಲ್ಲು-ತಲ್ತರೆಶೆಟ್ಟಳ್ಳಿ-ತಾಕೇರಿಯ 15 ಕಿ.ಮೀ. ಉದ್ದದ ರಸ್ತೆಗೆ 11ಲಕ್ಷ ಹಣ ಪಾವತಿಯಾಗಿದ್ದು, ರಸ್ತೆಯ ನಿರ್ವಹಣಾ ಕಾಮಗಾರಿ ಮಾತ್ರ ನಡೆದಿಲ್ಲ. ಇದರೊಂದಿಗೆ 10 ಕಿ.ಮೀ. ಉದ್ದದ ಮಾವಿನಕಟ್ಟೆ-ತಲ್ತರೆ-ಬಾರ್ಲಗದ್ದೆ ರಸ್ತೆಗೆ 8ಲಕ್ಷ ನೀಡಲಾಗಿದ್ದು, ಕೇವಲ 1.50 ಕಿ.ಮೀ. ಕೆಲಸ ಮಾಡಿ ಬಾಕಿ ಹಣ ಪೋಲಾಗಿದೆ ಎಂದು ಬಗ್ಗನ ಅನಿಲ್ ಆರೋಪಿಸಿದರು.

4 ಕಿ.ಮೀ. ಉದ್ದದ ಹಾನಗಲ್ಲು-ಕಿರಗಂದೂರು ರಸ್ತೆಗೆ 3 ಲಕ್ಷ, 4.20 ಕಿ.ಮೀ. ಉದ್ದದ ಆಲೂರು ಸಿದ್ದಾಪುರ-ಗಣಗೂರು ರಸ್ತೆಗೆ 4ಲಕ್ಷ, 24 ಕಿ.ಮೀ. ಉದ್ದದ ಗೋಪಾಲ ಪುರ-ಬಾಣಾವರ-ಹೆಬ್ಬಾಲೆ ರಸ್ತೆಗೆ 14 ಲಕ್ಷ, 1.50 ಕಿ.ಮೀ. ಉದ್ದದ ಕಾನನಕಾಡು-ಕೃಷ್ಣಾಪುರ-ವಾಲ್ನೂರು ರಸ್ತೆಗೆ 1.20 ಲಕ್ಷ, 4 ಕಿ.ಮೀ. ದೂರದ ಅಭ್ಯತ್‍ಮಂಗಲ-ಚೇರಳ ಶ್ರೀಮಂಗಲ ರಸ್ತೆಗೆ 5ಲಕ್ಷ ಬಿಲ್ ಮಾಡಲಾಗಿದ್ದು, ಕೆಲಸ ನಿರ್ವಹಿಸಿಲ್ಲ ಎಂದು ಆಪಾದಿಸಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಹಿರಿಸಾವೆ-ಚೆಟ್ಟಳ್ಳಿ ರಸ್ತೆ ಅಭಿವೃದ್ಧಿ ಎಂದು ತೋರಿಸಿ ಎರಡು ಯೋಜನೆಗಳ ಮೂಲಕ ಹಣ ಸೇರಿಸಿದ್ದಾರೆ. 42.68 ಕಿ.ಮೀ. ರಸ್ತೆಗೆ 60ಲಕ್ಷ ಬಿಲ್ ಮಾಡಲಾಗಿದೆ. 64 ಕಿ.ಮೀ. ದೂರದ ವೀರಾಜಪೇಟೆ-ಬೈಂದೂರು ರಸ್ತೆಗೆ 60 ಲಕ್ಷ, 27.08 ಕಿ.ಮೀ. ಉದ್ದದ ಬೆಂಗಳೂರು-ಜಾಲ್ಸೂರು ರಸ್ತೆಗೆ 30.74ಲಕ್ಷ, 51 ಕಿ.ಮೀ. ಉದ್ದದ ಮಡಿಕೇರಿ-ಕುಟ್ಟ, ಕೊಣನೂರು-ಮಾಕುಟ್ಟ ರಸ್ತೆಗೆ 70 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಕೋವರ್‍ಕೊಲ್ಲಿ ಸಮೀಪ ಟಾಟಾ ಕಾಫಿ ಎಸ್ಟೇಟ್‍ನವರೇ ರಸ್ತೆ ಬದಿ ಚರಂಡಿ ನಿರ್ಮಿಸಿ, ಪ್ರತಿ ವರ್ಷ ರಸ್ತೆ ನಿರ್ವಹಿಸಿಕೊಂಡು ಬರುತ್ತಿದ್ದು, ಈ ಕೆಲಸವನ್ನು ತಾವೇ ಮಾಡಿದ್ದು ಎಂದು ಬಿಲ್ ಮಾಡಿಕೊಳ್ಳಲಾಗಿದೆ ಎಂದು ಬಗ್ಗನ ಅನಿಲ್ ದೂರಿದರು.

ವಿಶೇಷ ಪ್ಯಾಕೇಜ್ ಮತ್ತು ಎಸ್‍ಸಿಪಿ-ಎಸ್‍ಟಿಪಿ ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದೆ. ಕಾಂಕ್ರೀಟ್ ರಸ್ತೆಯ ಬದಿಗೆ ಗ್ರಾವೆಲ್ ಮಣ್ಣು ಹಾಕದೇ ಹಣ ಗುಳುಂ ಮಾಡಲಾಗಿದೆ. ಕ್ರಿಯಾಯೋಜನೆ ಯಂತೆ ರಸ್ತೆ ಕೆಲಸ ನಿರ್ವಹಿಸದೇ ಬಿಲ್ ಪಾವತಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳು ಹಾಗೂ ಯೋಜನೆ ಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅನಿಲ್‍ಕುಮಾರ್, ಪ್ರಮುಖ ರಾದ ಕೆ.ಟಿ. ಪರಮೇಶ್, ಪವಿತ್ರ ದೇವೇಂದ್ರ, ತ್ರಿಶೂಲ್, ಪ್ರಕಾಶ್, ಬಸಪ್ಪ, ಹರೀಶ್, ಎ.ಆರ್. ಮುತ್ತಣ್ಣ, ಗಣಪತಿ, ರಾಮಚಂದ್ರ, ಅಭಿನಂದನ್, ನಾಗೇಶ್, ಸೂರಿ ಪೊನ್ನಪ್ಪ ಸೇರಿದಂತೆ ಇತರರು ಒತ್ತಾಯಿಸಿದರು.

ಮುಂದಿನ 15 ದಿನಗಳ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ನೂತನವಾಗಿ ಆಗಮಿಸಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.

ಸ್ಥಳದಲ್ಲಿದ್ದ ಸಹಾಯಕ ಇಂಜಿನಿಯರ್ ವೆಂಕಟೇಶ್ ನಾಯ್ಕ್, ಕಿರಿಯ ಇಂಜಿನಿಯರ್‍ಗಳಾದ ಶೈಜನ್ ಕೆ.ಪೀಟರ್, ರಘುಕುಮಾರ್ ಅವರುಗಳನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ‘ನೀವುಗಳು ಗುತ್ತಿಗೆದಾರರು ಹೇಳಿದ ರೀತಿ ಕೆಲಸ ಮಾಡ್ತಿದ್ದೀರಿ. ಸಾರ್ವಜನಿಕರ ಪರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮನೆಗೆ ಹೋಗಿ, ಸರ್ಕಾರಿ ಕೆಲಸಕ್ಕೆ ಯಾಕ್ ಬರ್ತೀರಾ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂವರು ಅಭಿಯಂತರರು ‘ಆಗಿರುವ ಲೋಪದೋಷವನ್ನು ಒಪ್ಪಿಕೊಂಡಿದ್ದು, ತಾ. 05.06.2018ರ ಒಳಗೆ ಸರಿಪಡಿಸುತ್ತೇವೆ. ಇದಕ್ಕೆ ತಪ್ಪಿದ್ದಲ್ಲಿ ನಮಗಳ ವಿರುದ್ಧ ಯಾವದೇ ಕ್ರಮ ಕೈಗೊಳ್ಳಲು ಒಪ್ಪಿದ್ದೇವೆ’ ಎಂದು ಲಿಖಿತ ಹೇಳಿಕೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆ ಯಲಾಯಿತು.