ಸುಂಟಿಕೊಪ್ಪ,ಮೇ.21: ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸಾಗಾಟ ನಡೆಸುತ್ತಿದ್ದ ವಾಹನ ಹಾಗೂ ಕಲ್ಲುಗಣಿಯನ್ನು ಪೊಲೀಸರು ಮುಟ್ಟುಗೊಲು ಹಾಕಿಕೊಂಡಿರುವ ಬಗ್ಗೆ ವರದಿಯಾಗಿದೆ.
ಇಲ್ಲಿಗೆ ಸಮೀಪದ 7ನೇ ಹೊಸಕೋಟೆ ನಿವಾಸಿಗಳಾದ ಮೊಹಮ್ಮದ್ ಮತ್ತು ಬೀರನ್ ಎಂಬವರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಪೊಲೀಸ್ ಹಾಗೂ ಗಣಿಭೂವಿಜ್ಞಾನ ಅಧಿಕಾರಿಗಳು ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಲಾಗಿ ಯಾವದೇ ಇಲಾಖೆಗಳಿಂದ ಅನುಮತಿ ಪರವಾನಗಿ ಪಡೆಯದೆ ಅಕ್ರಮ ಗಣಿಗಾರಿಕೆ ನಡೆಸಿ ಸಾಗಾಟಗೊಳಿಸುತ್ತಿರುವದು ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನಲೆ ಕಾರ್ಯಪ್ರವೃತರಾದ ಠಾಣಾಧಿಕಾರಿ ಜಯರಾಮ್ ಹಾಗೂ ಗಣಿ ಭೂ ಇಲಾಖೆಯ ಅಧಿಕಾರಿಗಳು ಅಕ್ರಮ ಗಣಿಗಾರಿಕಾ ಸ್ಥಳವನ್ನು ಮುಟ್ಟುಗೋಲು ಹಾಕಿಕೊಂಡರು. ಸಾಗಾಟಕ್ಕೆ ಬಳಸುತ್ತಿದ್ದ ಟಿಪ್ಪರ್ (ಕೆಎ12-ಬಿ.0164) ವಾಹನ ಚಾಲಕ ಅಬೂಬಕ್ಕರ್ ಪುತ್ರ ಜಕ್ರಿಯ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. -ರಾಜು ರೈ