ಗೋಣಿಕೊಪ್ಪ ವರದಿ, ಮೇ 21 : ವಿವೇಕಾನಂದರ ಚಿಂತನೆಯಂತೆ ಕಳೆದ 75 ವರ್ಷದಿಂದ ದಕ್ಷಿಣ ಕೊಡಗಿನ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆಯ ಅಮೃತ ಮಹೋತ್ಸವ ತಾ. 23 ರಿಂದ ಮೂರು ದಿನಗಳ ಕಾಲ ಆಚರಣೆ ನಡೆಯಲಿದೆ.

ರಾಮಕೃಷ್ಣ ಮಠ ಮತ್ತು ಮಿಷನ್ ಮೂಲಕ ಜನರಿಗೆ ಸೇವಾಕಾರ್ಯ ನಿರ್ವಹಿಸುವ ಚಿಂತನೆಯಂತೆ ನಡೆಯುತ್ತಿರುವ ಈ ಆಸ್ಪತ್ರೆ ಬಡರೋಗಿಗಳ ಆಶಾಕಿರಣವಾಗಿ ಸೇವೆ ನೀಡುತ್ತಿದೆ. ಜನರ ಜೀವಕ್ಕೆ ರಕ್ಷಣೆಯಾಗಿ ಮುನ್ನಡೆಯುತ್ತಿರುವ ಆಸ್ಪತ್ರೆ ಅಮೃತಮಹೋತ್ಸವದ ಮೂಲಕ ಮತ್ತಷ್ಟು ಸೇವೆ ನೀಡಲು ಮುಂದಾಗಿದೆ. 23 ರಂದು ಸಂಜೆ 4.30 ಕ್ಕೆ ಅಮೃತಮಹೊತ್ಸವ ಕಾರ್ಯಕ್ರಮವನ್ನು ಶಾರದಾಶ್ರಮದ ಶಾಂಭವನಂದ ಸಭಾಂಗಣದಲ್ಲಿ ಉದ್ಘಾಟಿಸುವ ಮೂಲಕ ಚಾಲನೆ ನೀಡಲಿದೆ. ಹಿರಿಯ ಸ್ವಾಮೀಜಿ ಸುಹಿತನಂದಾಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಇನ್ಟಿಟ್ಯೂಟ್ ಮುಖ್ಯಸಟ್ಡಾ. ಸಿ. ಪಿ. ನಂಜರಾಜ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30 ಕ್ಕೆ ಆರತಿ, ಭಜನೆ, 7 ಕ್ಕೆ ದತ್ತಾತ್ರೆಯ ವೇಲಂಕರ್ ಅವರಿಂದ ಹರಿಕಥೆ ನಡೆಯಲಿದೆ.

24 ರಂದು ಬೆ. 10 ಕ್ಕೆ ವಿವೇಕಾನಂದ ಆರೋಗ್ಯಧಾಮ ಉದ್ಘಾಟನೆ ನಡೆಯಲಿದೆ. ಸ್ವಾಮೀಜಿ ಸುಹಿತನಂದಾಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಕೊಕ್ಕೇಂಗಡ ಮೊಣ್ಣಪ್ಪ, ಪಾರ್ವತಿ ಸಂಕೀರ್ಣವನ್ನು ಸ್ವಾಮಿ ಬೋಧಸರಣಾನಂದಾಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಡಾ. ಕೆ. ಕೆ. ಶಿವಪ್ಪ, ಆಶ್ರಮದ ವಿಶ್ರಾಂತ ಸ್ವಾಮೀಜಿಗಳಾದ ಜಗದಾತ್ಮಾನಂದಾಜಿ, ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಣನಂದಾಜಿ, ಲಕ್ನೋ ರಾಮಕೃಷ್ಣ ಮಠದ ಅಧ್ಯಕ್ಷ ಮುಕ್ತಿನಾಥನಂದಾಜಿ, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ, ಪಾಲ್ಗೊಳ್ಳಲಿದ್ದಾರೆ. ಅಂದು ಬೆ. 7.30 ಕ್ಕೆ ವಿಶೇಷ ಪೂಜೆ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ.

25 ರಂದು ಬೆ. 9.30 ರಿಂದ 3 ಗಂಟೆವರೆಗೆ ಮಲ್ಟಿಸ್ಪೆಷಾಲಿಟಿ ಫ್ರೀ ಮೆಡಿಕಲ್ ಕ್ಯಾಂಪ್ ನಡೆಯಲಿದೆ. ಅತಿಥಿಗಳಾಗಿ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ. ಪೊನ್ನಪ್ಪ ಭಾಗವಹಿಸಲಿದ್ದಾರೆ. ಈ ಸಂದರ್ಭ ಉತ್ತಮ ಆರೋಗ್ಯ ರಕ್ಷಣೆಯಲ್ಲಿನ ಉಪಯೋಗಿ ಅಂಶಗಳ ಬಗ್ಗೆ ವಿಚಾರ ಸಂಕೀರಣ ನಡೆಯಲಿದೆ. ಅತಿಥಿಗಳಾಗಿ ಮೈಸೂರು ಜೆಎಸ್‍ಎಸ್ ಕಾಲೇಜು ಮುಖ್ಯಸ್ಥ ಡಾ. ಬಸವಣ್ಣಗೌಡ, ಮಡಿಕೇರಿ ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಪ್ರಭಾರ ಮುಖ್ಯಸ್ಥ ಡಾ ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.