ಕುಶಾಲನಗರ, ಮೇ 20: ಶಿಸ್ತು ಪ್ರಾಮಾಣಿಕತೆಗೆ ಹೆಸರಾದ ಜಿಲ್ಲೆಯ ಕೀರ್ತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ವಿದ್ಯಾವರ್ಧಕ ಕಾನೂನು ಕಾಲೇಜು ನಿವೃತ್ತ ಪ್ರಾಂಶುಪಾಲೆ ಅಮೆ ವಿಶಾಲಾಕ್ಷಿ ಕಾಳಪ್ಪ ಅಭಿಪ್ರಾಯಪಟ್ಟರು.

ಚೆಟ್ಟಿಮಾನಿಯ ಪದಕಲ್ಲು ಗ್ರಾಮದಲ್ಲಿರುವ ಅಮೆಮನೆ ಕುಟುಂಬಸ್ಥರ ಮಹಾವಿಷ್ಣು ಗುಡಿ ಆವರಣದಲ್ಲಿ ನಡೆದ ದೇವಾಲಯ ವಾರ್ಷಿಕೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸವಲತ್ತುಗಳ ಕೊರತೆ ಮಧ್ಯೆಯೂ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಉತ್ತಮ ಪೈಪೋಟಿ ನೀಡುತ್ತಾ ಸಾಧನೆ ತೋರುತ್ತಿರುವುದು ಶ್ಲಾಘನೀಯ. ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಪಡೆಯಬೇಕು. ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳನ್ನು ಬರೆಯುವ ಮೂಲಕ ಉನ್ನತ ಅಧಿಕಾರಿಗಳಾಗುವ ದಿಸೆಯಲ್ಲಿ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ನಿರ್ದೇಶಕ ಅಮೆ ಕೆ. ಸೋಮಣ್ಣ ಮಾತನಾಡಿ, ಕನಸು ಕಾಣುವದರಿಂದ ಯಾವದೇ ಸಾಧನೆ ಮಾಡಲಾಗುವದಿಲ್ಲ. ಸ್ವಪ್ರಯತ್ನದೊಂದಿಗೆ ಕಠಿಣ ಅಭ್ಯಾಸ ನಡೆಸುವ ಸಾಧಕರಿಗೆ ಭಗವಂತನ ಅನುಗ್ರಹ ಸದಾ ಇರುತ್ತದೆ ಎಂದರು. ಇದೇ ಸಂದರ್ಭ ಸ್ಥಳೀಯ ಮಹಾವಿಷ್ಣು ದೇವಾಲಯದಲ್ಲಿ ಗಣಪತಿ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಸಲಾಯಿತು. ಕುಶಾಲನಗರದ ಪ್ರಸನ್ನ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅಮೆ ಕುಟುಂಬಸ್ಥರ ಸಂಘದ ಅಧ್ಯಕ್ಷ ಅಮೆ ಜನಾರ್ದನ, ಕಾರ್ಯದರ್ಶಿ ಶೇಖರ, ಖಜಾಂಚಿ ಲೋಕೇಶ್, ಕುಟುಂಬದ ಹಿರಿಯರು ಮತ್ತು ವಿವಿಧ ಭಾಗಗಳಲ್ಲಿ ನೆಲೆಸಿರುವ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಟುಂಬದ ಸಾಧಕ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಯಶ್ಚಿತ, ದೀಪೇಂದ್ರ, ಸುಶ್ಮಿತ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಶ್ಯಾಂಪ್ರಸಾದ್, ದೀಪುಪ್ರಕಾಶ್, ಮೋನಿಕಾ, ಮೋನಿಶಾ, ಕೃತಿಕಾ, ಸೂರಜ್ ಇವರುಗಳನ್ನು ಗೌರವಿಸಿದರು.