.
ಎಸ್‍ಎಸ್‍ಎಲ್‍ಸಿ ಪಾಸ್ ಆದ ಲಕ್ಷಾಂತರ ಮಕ್ಕಳ ಮೊದಲ ಆಯ್ಕೆ ಪಿಯುಸಿ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಪಿಯುಸಿ ಓದಬಹುದು. ವಿಜ್ಞಾನ, ವಾಣಿಜ್ಯ ಮತ್ತು ಕಲೆ ಎನ್ನುವ ಮೂರು ವಿಭಾಗಗಳಲ್ಲಿ ಹತ್ತಾರು ಕಾಂಬಿನೇಷನ್‍ಗಳ ಆಯ್ಕೆಯೂ ಇದೆ. ಎಸ್‍ಎಸ್‍ಎಲ್‍ಸಿವರೆಗೆ ಸರ್ಕಾರ ನಿಗದಿಪಡಿಸಿದ ಪಠ್ಯ, ಮೇಷ್ಟ್ರು ಹೇಳಿಕೊಟ್ಟ ಪಾಠ ಓದುತ್ತಿದ್ದ ವಿದ್ಯಾರ್ಥಿಗೆ ಪಿಯುಸಿಗಾಗಿ ಅರ್ಜಿ ಹಾಕಲು ಕಾಲೇಜಿನ ಎದುರು ನಿಂತಾಗ ತನ್ನ ಭವಿಷ್ಯಕ್ಕೆ ಸಂಬಂಧಿಸಿದ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದ ಒತ್ತಡ ಎದುರಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಇದು ಮತ್ತೆ ಹಿಂದಿರುಗಿ ಬರಲು ಸಾಧ್ಯವೇ ಇರದಂಥ ನಿರ್ಧಾರವೂ ಆಗಿರುತ್ತದೆ. ಮಕ್ಕಳ ಭವಿಷ್ಯಕ್ಕೆ ಒಳಿತಾಗುವ ದಾರಿ ತೋರಬೇಕಾದ ಪೋಷಕರಿಗೂ ಇದು ಸವಾಲಿನ ಗಳಿಗೆ.
ಏನೆಲ್ಲಾ ಓದಬಹುದು?: ಪಿಯುಸಿ ಓದುವ ಪ್ರತಿ ವಿದ್ಯಾರ್ಥಿಯು ಪ್ರಥಮ ಭಾಷೆ ಮತ್ತು ದ್ವಿತೀಯ ಭಾಷೆಯೊಂದಿಗೆ ನಾಲ್ಕು ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಭಾಷೆಯಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ಉರ್ದು ಸೇರಿದಂತೆ 11 ಆಯ್ಕೆಗಳು ಇವೆ. ವಿಷಯಗಳಲ್ಲಿ ಐಚ್ಛಿಕ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ತರ್ಕಶಾಸ್ತ್ರ, ಭೂಗೋಳ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವಾಣಿಜ್ಯ ಅಧ್ಯಯನ (ಬ್ಯುಸಿನೆಸ್ ಸ್ಟಡೀಸ್), ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಶಿಕ್ಷಣ, ಗೃಹವಿಜ್ಞಾನ, ಮೂಲಗಣಿತ ಇವೆ.
ವಿಜ್ಞಾನ ತೆಗೆದುಕೊಳ್ಳುವ ಮುನ್ನ: ಮೂಲವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಆಸೆ ಇರುವವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ. ಸಂಕೀರ್ಣ ಪರಿಕಲ್ಪನೆಗಳು, ಸಿದ್ಧಾಂತಗಳು, ಸೂತ್ರಗಳು ಮತ್ತು ಪ್ರಯೋಗಗಳನ್ನು ನಿರ್ವಹಿಸುವ ಚಾಕಚಕ್ಯತೆ ಇರುವ ಮಕ್ಕಳಿಗೆ ಇದು ಹೊಂದುತ್ತದೆ. ಯಾರದ್ದೋ ಒತ್ತಡಕ್ಕೆ ವಿಜ್ಞಾನ ಆಯ್ಕೆ ಮಾಡಿಕೊಳ್ಳುವ ಕೆಲವು ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡು, ಪ್ರಥಮ ಪಿಯುಸಿಯ ನಂತರ ವಿಭಾಗ ಬದಲಿಸಿಕೊಳ್ಳುವದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತೆ ಆಗಿದೆ.
ಲೆಕ್ಕಾಚಾರ ನಿಮಗೆ ಇಷ್ಟವೇ?: ಅಂಕಿ-ಅಂಶಗಳು, ದತ್ತಾಂಶ, ಮಾಹಿತಿ, ಸಿದ್ಧಾಂತ ಮತ್ತು ವಿಶ್ಲೇಷಣೆಗಳ ಬಗ್ಗೆ ಆಸಕ್ತಿ ಇದ್ದರೆ ಮಾತ್ರ ವಾಣಿಜ್ಯ ವಿಭಾಗ ಆರಿಸಿಕೊಳ್ಳುವ ಆಲೋಚನೆ ಮಾಡಿ. ರಾಜ್ಯ ಪಠ್ಯಕ್ರಮಗಳಿಂದ (ಸ್ಟೇಟ್ ಸಿಲಬಸ್) ಪಿಯುಸಿಗೆ ಸೇರಿಕೊಳ್ಳುವ ಬಹುತೇಕ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ಬೋಧಿಸುವ ಬಹುತೇಕ ವಿಷಯಗಳು ಹೊಸತೇ ಆಗಿರುತ್ತವೆ. ಶೀಘ್ರ ಕಲಿಕೆಯ ಸಾಮಥ್ರ್ಯ ಮತ್ತು ಲೆಕ್ಕಗಳನ್ನು ಬಿಡಿಸುವ ಚಾಕಚಕ್ಯತೆ ಇರುವವರಿಗೆ ವಾಣಿಜ್ಯ ವಿಷಯ ಸುಲಭ. ‘ಕ್ಲಾಟ್’ (ಅಐಂಖಿ- ಅommoಟಿ ಐಚಿತಿ ಂಠಿಣiಣuಜe ಖಿesಣ), ‘ಸಿಪಿಟಿ’ (ಅPಖಿ- ಅommoಟಿ Pಡಿoಜಿiಛಿieಟಿಛಿಥಿ ಖಿesಣ) ತೆಗೆದುಕೊಳ್ಳುವ ಆಸೆ ಇರುವವರಿಗೆ ವಾಣಿಜ್ಯ ವಿಭಾಗ ಸೂಕ್ತ.
ಕಲಾ ವಿಭಾಗ ಕಡಿಮೆಯಲ್ಲ: ಕಡಿಮೆ ಬುದ್ಧಿವಂತಿಕೆ ಇರುವವರು ಮಾತ್ರ ಕಲಾ ವಿಭಾಗ ಆರಿಸಿಕೊಳ್ಳುತ್ತಾರೆ ಎನ್ನುವ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಕಲಾ ವಿಭಾಗ ಆರಿಸಿಕೊಳ್ಳಲು ನೀವು ಕಲಾವಿದರೇ ಆಗಿರಬೇಕು ಎಂದೇನಿಲ್ಲ. ಇಲ್ಲಿಯೂ ಹಲವು ಆಸಕ್ತಿಕರ ವಿಷಯಗಳು ಇವೆ. ಮನಃಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ತರ್ಕಶಾಸ್ತ್ರಗಳನ್ನು ಓದುವಾಗ ಜ್ಞಾನಾರ್ಜನೆಯ ಜೊತೆಗೆ ನಮ್ಮನ್ನೂ ನಾವು ಅರಿತುಕೊಳ್ಳುತ್ತೇವೆ. ಭಾಷೆಯ ಮೇಲೆ ಹಿಡಿತ, ಸಾಮಾಜಿಕ ಒಡನಾಟ, ಕಲಾತ್ಮಕ ಮನಃಸ್ಥಿತಿ ಮತ್ತು ಸಂವಹನ ಕೌಶಲ ಇರುವವರಿಗೆ ಕಲಾ ವಿಭಾಗ ಹೇಳಿ ಮಾಡಿಸಿದ್ದು.
ಕಲಾ ವಿಭಾಗವನ್ನು ಆರಿಸಿಕೊಂಡವರು ಕಡಿಮೆ ಓದಬೇಕು, ಕಾಲೇಜಿಗೆ ಹೋಗದಿದ್ದರೂ ಪರವಾಗಿಲ್ಲ, ಆರಾಮವಾಗಿ ಪಾಸಾಗಬಹುದು ಎಂಬುದೆಲ್ಲಾ ತಪ್ಪು ಕಲ್ಪನೆಗಳಿವೆ. ಕಲಾ ವಿಭಾಗದಲ್ಲಿ ಪಠ್ಯದ ಜೊತೆಗೆ ಪೂರಕ ಪಠ್ಯಗಳನ್ನೂ ಸಾಕಷ್ಟು ಓದಿದಾಗ ಮಾತ್ರ ನಮ್ಮ ಜ್ಞಾನ ವಿಸ್ತಾರಗೊಳ್ಳುತ್ತದೆ. ದೇಶದ ಅತ್ಯುತ್ತಮ ವಕೀಲರು, ಪತ್ರಕರ್ತರು, ಸಮಾಜವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ನೀತಿನಿರೂಪಕರು, ನಾಗರಿಕ ಸೇವಾ ಅಧಿಕಾರಿಗಳಲ್ಲಿ ಹೆಚ್ಚಿನವರು ಕಲಾ ವಿಭಾಗದ ವಿಷಯಗಳನ್ನೇ ಅಭ್ಯಾಸ ಮಾಡಿದವರಾಗಿರುತ್ತಾರೆ. ವಿದ್ಯಾರ್ಥಿಯ ಪಠ್ಯೇತರ ಆಸಕ್ತಿಗಳನ್ನು ಗಮನಿಸಿ. 10ನೇ ತರಗತಿಯ ವಿವಿಧ ಕಿರುಪರೀಕ್ಷೆಗಳ ಅಂಕಗಳನ್ನು ಗಮನಿಸಿ. ವಿದ್ಯಾರ್ಥಿಯ ನೆನಪಿನ ಶಕ್ತಿ, ವಿಶ್ಲೇಷಣಾ ಸಾಮಥ್ರ್ಯ ಗುರುತಿಸಿಕೊಳ್ಳಿ. ವಿದ್ಯಾರ್ಥಿಗೆ ನಿಜವಾಗಿ ಯಾವ ವಿಭಾಗ ಇಷ್ಟವಿದೆ ಎಂಬುದನ್ನು ಪೋಷಕರು ಆಲಿಸಬೇಕು. ಅವರ ಓದಿನ ವಿಧಾನ, ಗ್ರಹಿಕೆಯ ಸಾಮಥ್ರ್ಯ, ಮಾತುಗಾರಿಕೆಯನ್ನು ಗಮನಿಸಿಕೊಳ್ಳಿ. ಹರೆಯದ ಹುಡುಗರ ಬಂಡುಕೋರ ಮನೋವೃತ್ತಿಯನ್ನು ಪೋಷಕರು ಮತ್ತು ವಿದ್ಯಾರ್ಥಿಗಳಿಬ್ಬರೂ ವಿಶ್ಲೇಷಿಸಿಕೊಳ್ಳಬೇಕು. ಅನಂತರವೇ ವಿಭಾಗವನ್ನು ನಿರ್ಧರಿಸಬೇಕು. ಉದ್ಯೋಗಾವಕಾಶಗಳು, ಟ್ರೆಂಡ್‍ಗಳನ್ನು ಗಮನಿಸಿ.
ಪಿಯುಸಿ ಏಕೆ ಓದಲೇಬೇಕು?: ಉನ್ನತ ಶಿಕ್ಷಣಕ್ಕೆ ಪಿಯುಸಿ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ. ಅನೇಕ ಉದ್ಯೋಗಗಳಿಗೆ ಪಿಯುಸಿ ಕನಿಷ್ಟ ವಿದ್ಯಾರ್ಹತೆ ಆಗಿದೆ. ಪದವಿ ಓದಲು ಸಾಧ್ಯವಾಗದಿದ್ದರೆ ಅಥವಾ ಅಂಚೆ ತೆರಪಿನ ಶಿಕ್ಷಣದ ಮೂಲಕ ಪದವಿ ಅಭ್ಯಾಸ ಮಾಡಲು ಇಚ್ಛಿಸಿದರೆ ಪಿಯುಸಿ ಅಂಕಪಟ್ಟಿ ವರದಾನವಾಗುತ್ತದೆ. ಹಗಲು ಹೊತ್ತು ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಸಂಜೆ ಕಾಲೇಜಿನಲ್ಲಿ ಕಲಿಯುವ ಅವಕಾಶ ಇದೆ.
ವಿಭಾಗಗಳು-ವಿಷಯಗಳು: ಪಿಯುಸಿಯಲ್ಲಿ ಅಭ್ಯಾಸಕ್ಕೆ ಲಭ್ಯವಿರುವ ಎಲ್ಲ ವಿಷಯಗಳನ್ನು ಮೂರು ವಿಭಾಗಗಳಲ್ಲಿ ವಿವಿಧ ಕಾಂಬಿನೇಷನ್‍ಗಳಾಗಿ ವಿಂಗಡಿಸಲಾಗಿದೆ. ಕಲಾ ವಿಭಾಗದಲ್ಲಿ ಹೆಚ್‍ಇಪಿಎಸ್ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ), ಹೆಚ್‍ಇಕೆಎಸ್ (ಇತಿಹಾಸ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ ಮತ್ತು ಸಮಾಜಶಾಸ್ತ್ರ) ಜನಪ್ರಿಯ ಕಾಂಬಿನೇಷನ್ ಆಗಿದೆ.
ವಾಣಿಜ್ಯ ವಿಭಾಗದಲ್ಲಿ ಬಿಎಎಸ್ಬಿ (ಮೂಲಗಣಿತ, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ ಮತ್ತು ಬ್ಯುಸಿನೆಸ್ ಸ್ಟಡೀಸ್) ಜನಪ್ರಿಯ ಆಯ್ಕೆ ಎನಿಸಿದೆ. ಕೆಲವು ಕಾಲೇಜುಗಳ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಮಾಜಶಾಸ್ತ್ರ, ಇತಿಹಾಸದ ವಿಷಯವನ್ನು ಕಾಂಬಿನೇಷನ್‍ಗಳಲ್ಲಿ ಸೇರಿಸಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ಜನಪ್ರಿಯ ಕಾಂಬಿನೇಶನ್. ಎಂಜಿನಿಯರಿಂಗ್ ಇಷ್ಟಪಡುವವರು ಜೀವಶಾಸ್ತ್ರದ ಬದಲು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಅಥವಾ ಭೂವಿಜ್ಞಾನವನ್ನು ಆರಿಸಿಕೊಳ್ಳಬಹುದು. ವೈದ್ಯಕೀಯ ನಿಮ್ಮ ಗುರಿಯಾಗಿದ್ದರೆ ಗಣಿತದ ಬದಲು ಗೃಹವಿಜ್ಞಾನ ಅಥವಾ ಸಂಖ್ಯಾಶಾಸ್ತ್ರ ಆರಿಸಿಕೊಳ್ಳಬಹುದು. ವಿಭಾಗ ಆರಿಸಿಕೊಳ್ಳುವಾಗ ಒಂದು ವಿಷಯ ಗಮನದಲ್ಲಿರಲಿ. ನೀವು ಪಿಯುಸಿಯಲ್ಲಿ ವಿಜ್ಞಾನ ಓದಿದ್ದರೆ ಮುಂದೆ ಪದವಿ ಓದುವಾಗ ಕಲೆ ಅಥವಾ ವಾಣಿಜ್ಯ ವಿಭಾಗಗಳಲ್ಲಿ (ಬಿಕಾಂ, ಬಿಎ, ಬಿಬಿಎಂ ಮತ್ತು ಬಿಬಿಎ) ಅಭ್ಯಾಸ ಮಾಡಲು ಅವಕಾಶ ಇರುತ್ತದೆ. ಪಿಯುಸಿಯಲ್ಲಿ ಕಲೆ ಓದಿದ್ದರೆ ಪದವಿ ಹಂತದಲ್ಲಿ ವಿಜ್ಞಾನ ಓದಲು ಅವಕಾಶ ಇರುವುದಿಲ್ಲ. ಆದರೆ ಈಚೆಗೆ ಕೆಲವು ಪ್ಯಾರಾ ಮೆಡಿಕಲ್ ಕೋರ್ಸ್‍ಗಳು ಮಾತ್ರ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮುಕ್ತವಾಗಿವೆ.
ಪಿಯುಸಿಯಲ್ಲಿ ಯಾವ ವಿಭಾಗ ಆರಿಸಿಕೊಳ್ಳಬೇಕು ಎನ್ನುವ ನಿರ್ಧಾರವನ್ನು ವಿದ್ಯಾರ್ಥಿಗಳೇ ತೆಗೆದುಕೊಳ್ಳಬೇಕು. ಯಾವ ವಿಭಾಗದಲ್ಲಿ ಓದಿದರೆ ಏನಾಗುತ್ತದೆ ಎಂಬುದನ್ನು ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗೆ ವಿವರಿಸಬೇಕು. ಮಕ್ಕಳ ಆಸಕ್ತಿಯನ್ನು ಹತ್ತಿಕ್ಕುವದು, ಆಸೆಗಳನ್ನು ದಮನಿಸುವದು ತಪ್ಪು. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ.
(ಸಂಗ್ರಹ) - ಯಜಾಸ್ ದುದ್ದಿಯಂಡ, ಆಳ್ವಾಸ್ ಕಾಲೇಜು ಮೂಡುಬಿದಿರೆ.