ಶನಿವಾರಸಂತೆ, ಮೇ 20: ಕೊಡಗು ಜಿಲ್ಲೆಯ ಗಡಿಭಾಗ ಸಮೀಪದ ಯಸಳೂರು ಹೋಬಳಿಯ ಚಂಗಡಹಳ್ಳಿ ಮತ್ತು ಉಚ್ಚಂಗಿ ಗ್ರಾಮ ಪಂಚಾಯಿತಿ ಸುತ್ತ ಇರುವ ಹೇರೂರು ಬೆಟ್ಟ ಮತ್ತು ಗೌಡನ ಕೆರೆ ಉಳಿಸಬೇಕು. ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಪರಿಸರ ಹೋರಾಟಗಾರ ಹೆಚ್.ಕೆ. ರಮೇಶ್ ಆಗ್ರಹಿಸಿದರು.

ಪತ್ರಿಕಾ ಹೇಳಿಕೆ ನೀಡಿದ ಅವರು, ಹೇರೂರು ಬೆಟ್ಟ ಸಾವಿರಾರು ಎಕರೆ ಸರಕಾರಿ ಗೋಮಾಳವಾಗಿದೆ. ಇದು ಸಮುದ್ರ ಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿದೆ. ಹೇರೂರು ಗವಿಬೆಟ್ಟದಲ್ಲಿ ಗಿಡ-ಮರಗಳು, ಅಮೂಲ್ಯ ಗಿಡಮೂಲಿಕೆಗಳು, ಕಾಡುಕೋಣ, ಕಾಡುಕುರಿ, ಮೊಲ, ನವಿಲು, ಮುಳ್ಳುಹಂದಿ, ವಿವಿಧ ಬಗೆಯ ಪಕ್ಷಿಗಳು, ಹತ್ತಾರು ವಿಧದ ಚಿಟ್ಟೆಗಳು, ವಿವಿಧ ಜಾತಿಯ ಹಾವುಗಳು, ಹೆಜ್ಜೇನು, ಕಾಡುಜೇನು, ಕೋತಿಗಳನ್ನು ಕಾಣಬಹುದು. ಇದು ಚಾರಣಿಗರಿಗೆ ಸ್ವರ್ಗ ಎಂದು ವರ್ಣಿಸಿದರು.

ಗವಿಬೆಟ್ಟದ ತುದಿಯಲ್ಲಿ ಶಿಲೆಗಳಿಂದ ಆವೃತವಾಗಿರುವ ಯಾಣ ಮಾದರಿಯ ಯಾತ್ರಾ ಸ್ಥಳವಿದೆ. ಇಲ್ಲಿ ಗುಹಾಂತರ ದೇವಾಲಯವಿದ್ದು, ಹಿಂದೆ ರುದ್ರಮುನಿ ವಾಸಿಸುತ್ತಿದ್ದ ಸ್ಥಳ ಎಂಬದಕ್ಕೆ ಕುರುಹುಗಳಿವೆ. ಮಳೆ ಬಾರದಿದ್ದರೆ ಈ ಗುಹಾಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಮಳೆ ಬೀಳುತ್ತದೆ ಎಂಬದು ಸುತ್ತಮುತ್ತಲಿನ ಗ್ರಾಮಸ್ಥರ ಹೇಳಿಕೆ ಎಂದರು.

ಬೆಟ್ಟದಿಂದ ಅನತಿ ದೂರದಲ್ಲಿ ಸ.ನಂ. 137 ರಲ್ಲಿ 7 ಎಕರೆ 39 ಗುಂಟೆ ವಿಸ್ತೀರ್ಣದ ಹೇರೂರು ಗೌಡನ ಕೆರೆಯಿದೆ. ಈ ಕೆರೆ ರೈತರ ಜೀವನಾಡಿಯಾಗಿದ್ದು, ಪ್ರಾಣಿ-ಪಕ್ಷಿಗಳು, ದನ-ಕರುಗಳಿಗೆ ನೀರುಣಿಸುವ ಆಶ್ರಯ ತಾಣವಾಗಿದೆ. ಮಳೆಗಾಲದಲ್ಲಿ ಕೆರೆ ತುಂಬಿ ಹರಿದು ರೈತರ ಗದ್ದೆಗಳಿಗೆ ನೀರಾಗುತ್ತದೆ. ಕೆರೆ ತಳಭಾಗದಲ್ಲಿ ಇರುವ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ, ಮೆಣಸು, ಶುಂಠಿ, ತರಕಾರಿ ಬೆಳೆಯುವ ರೈತರಿಗೆ ಅನುಕೂಲವಾಗುತ್ತಿದೆ ಎಂದು ರಮೇಶ್ ವಿವರಿಸಿದರು.

ಕೆರೆ ಸುತ್ತಲು ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು. ಕೆರೆಯ ಹೂಳು ತೆಗೆಸಿ ಸುತ್ತಲೂ ಗಿಡ-ಮರ ಬೆಳೆಸಿ ಉದ್ಯಾನ ಮಾಡಿದರೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಬಹುದು ಎಂದು ಸಲಹೆ ನೀಡಿದರು. ದುರಂತವೆಂದರೆ, ಗವಿಬೆಟ್ಟ ಇತ್ತೀಚಿನ ದಿನಗಳಲ್ಲಿ ಭೂಮಾಫಿಯಾದವರ ಕಣ್ಣಿಗೆ ಬಿದ್ದಿದ್ದು, ಹೇಮಾವತಿ ನದಿ ಸಂತ್ರಸ್ಥರ ಹೆಸರಿನಲ್ಲಿ ಪಹಣಿ ಮಾಡಿಸಿ, ಜಾಗವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಈ ಅಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ರಾಜಕೀಯ ಪುಡಾರಿಗಳು ಶಾಮೀಲಾಗಿದ್ದಾರೆ. ನೂರಾರು ಎಕರೆ ಸರಕಾರಿ ಜಮೀನನ್ನು ನುಂಗಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ದಂಧೆಗೆ ಕಡಿವಾಣ ಹಾಕಬೇಕು. ಗವಿಬೆಟ್ಟವನ್ನು ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವಾಗಿಸಲು ಅನುದಾನ ಬಿಡುಗಡೆ ಮಾಡಿಸುವಂತೆಯೂ ಹೆಚ್.ಕೆ. ರಮೇಶ್ ಮನವಿ ಮಾಡಿದ್ದಾರೆ.

ಈ ಸಂದರ್ಭ ಕೃಷಿಕ ಸಮಾಜದ ಉಪಾಧ್ಯಕ್ಷ ಹೆಚ್.ಟಿ. ಗಣೇಶ್, ಪರಿಸರ ಹೋರಾಟಗಾರರಾದ ಕರುಣ್ ಕುಮಾರ್, ಸಂತೋಷ್, ದೇಜಪ್ಪ ಇತರರು ಇದ್ದರು.