ಬೆಂಗಳೂರು, ಮೇ 18: ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆ.ಜಿ. ಬೋಪಯ್ಯ ನೇಮಕವಾಗಿದ್ದಾರೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆಜಿ ಬೋಪಯ್ಯ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಶಿಫಾರಸ್ಸು ಮಾಡಿ ವಿಧಾನಸಭಾ ಕಾರ್ಯದರ್ಶಿ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಗೆ ರಾಜ್ಯಪಾಲ ವಜೂಭಾಯಿ ವಾಲಾ ಒಪ್ಪಿಗೆ ಸೂಚಿಸಿದ್ದು ಕೆಜಿ ಬೋಪಯ್ಯ ಅವರÀನ್ನು ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ.2008-13ರ ಬಿಜೆಪಿ ಸರಕಾರದ ಅವಧಿಯಲ್ಲಿ ಕೆ.ಜಿ. ಬೋಪಯ್ಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭ ನಡೆದ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆಗಳನ್ನು ಅವರು ನಿರ್ವಹಿಸಿದ್ದರು. ಶನಿವಾರ ಸಂಜೆ 4 ಗಂಟೆಗೆ ನಡೆಯಲಿರುವ ಬಹು ನಿರೀಕ್ಷಿತ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ಕೆಜಿ ಬೋಪಯ್ಯ ನಿರ್ವಹಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರಈಗಾಗಲೇ ಕೆ.ಜಿ. ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ
ನೇಮಕ ಪ್ರಶ್ನಿಸಿ ಸುಪ್ರೀಂಗೆ
ಈ ನಡುವೆ ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಅತ್ಯಂತ ಹಿರಿಯ, 8 ಬಾರಿಯ ಶಾಸಕ ಆರ್.ವಿ. ದೇಶಪಾಂಡೆಯವರನ್ನು ಬದಿಗೊತ್ತಿ 5 ಬಾರಿಯ ಶಾಸಕ ಕೆಜಿ ಬೋಪಯ್ಯ ಅವರನ್ನು
(ಮೊದಲ ಪುಟದಿಂದ) ನೇಮಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶಗೊಂಡಿದ್ದು ಸುಪ್ರೀಂ ಕೋರ್ಟ್ಗೆ ಈ ಸಂಬಂಧ ದೂರು ನೀಡಲು ನಿರ್ಧರಿಸಿದೆ. ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ಬಿಜೆಪಿ ನಡೆ ನಿಯಮಾವಳಿಗೆ ವಿರುದ್ಧವಾಗಿದೆ. ಸಾಮಾನ್ಯವಾಗಿ ಅತ್ಯಂತ ಹಿರಿಯ ನಾಯಕರು ಈ ಹುದ್ದೆಯನ್ನು ಅಲಂಕರಿಸಬೇಕು,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರ ನಿರ್ಧಾರದ ಕುರಿತು ಟ್ವಿಟ್ಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ದಿನೇಶ್ ಗುಂಡೂರಾವ್, ಇದು ಗೌರವಾನ್ವಿತ ರಾಜ್ಯಪಾಲರ ಆಘಾತಕಾರಿ ನಿರ್ಧಾರವಾಗಿದೆ. ಅತಿ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಅದರ ಪ್ರಕಾರ ಆರ್.ವಿ. ದೇಶಪಾಂಡೆ ಅವರನ್ನು ನೇಮಿಸಬೇಕಿತ್ತು ಎಂದಿದ್ದಾರೆ.