ನವದೆಹಲಿ, ಮೇ 18: ಕರ್ನಾಟಕ ನೂತನ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ತಾ. 19 ರ ಶನಿವಾರÀದಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸಮತ ಯಾಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಇಂದು ಹೇಳಿದ್ದು, ಕರ್ನಾಟಕದಲ್ಲಿ ಚುರುಕಿನ ರಾಜಕೀಯ ಚಟುವಟಿಕೆಗೆ ದಾರಿ ಮಾಡಿಕೊಡಲಿದೆ. ಯಾರಿಗೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‍ಎ ಬೋಬ್ಡೆ ಮತ್ತು ಅಶೋಕ್ ಭೂಷಣ್ ಇರುವ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಿಜೆಪಿ ಪರವಾಗಿ ಮುಕುಲ್ ರೋಹಟ್ಗಿ ಮತ್ತು ಕೆ.ಕೆ. ವೇಣುಗೋಪಾಲ್ ವಾದಿಸಿದರೆ, ಬಿಜೆಪಿಗೆ ವಿರುದ್ಧವಾಗಿ, ಕಾಂಗ್ರೆಸ್-ಜೆಡಿಎಸ್ ಪರವಾಗಿ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಗ್ವಿ ಮತ್ತು ದೇವದತ್ತ ಕಾಮತ್ ಅವರು ವಾದ ಮಂಡಿಸಿದರು. ಬಿಜೆಪಿ ವಿರುದ್ಧ ಮತ್ತೊಬ್ಬ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡ ನಿಂತಿದ್ದಾರೆ.ಇದೊಂದು ನಂಬರ್ ಗೇಮ್.. ಅತೀ ಹೆಚ್ಚು ಸಂಖ್ಯೆಯ ಅಥವಾ ಬಹುಮತ ಪಡೆದ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವದು ಸರಿಯಾದ ಕ್ರಮ. ಆದರೆ ವಿಶ್ವಾಸಮತ ಯಾಚನೆ ಸೂಕ್ತ ನಿರ್ಧಾರವಾಗುತ್ತದೆ. ಹೀಗಾಗಿ ನಾಳೆ ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದ್ದು, ಅದಕ್ಕಿಂತ ಮೊದಲೇ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಬೇಕು. ಶಾಸಕರಿಗೆ ಬೇಕಾದ ಸೂಕ್ತ ವ್ಯವಸ್ಥೆ ಮತ್ತು ಭದ್ರತೆಯನ್ನು ಡಿಜಿಪಿ ನೋಡಿಕೊಳ್ಳಬೇಕು. ಅಲ್ಲದೆ ವಿಶ್ವಾಸಮತ ಯಾಚನೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನೂ ಡಿಜಿ ಮತ್ತು ಐಜಿಪಿ ನೋಡಿಕೊಳ್ಳಬೇಕು. ವಿಶ್ವಾಸಮತ ಯಾಚನೆಗೂ ಮೊದಲು ಶಾಸಕರು ಕಡ್ಡಾಯವಾಗಿ sಶನಿವಾರ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಹೇಳಿದೆ.
ಇದೇ ವೇಳೆ ವಿಧಾನಸಭೆಗೆ ಸ್ಪೀಕರ್ ಆಯ್ಕೆ ಆಗಿರಬೇಕಿರುವದರಿಂದ ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಲಾಗಿದ್ದು, ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬ ನಿರ್ಧಾರ ಸಂಪೂರ್ಣವಾಗಿ ಹಂಗಾಮಿ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದ್ದು. ವಿಶ್ವಾಸಮತ ಯಾಚನೆವರೆಗೂ ಸಿಎಂ ಯಡಿಯೂರಪ್ಪ
(ಮೊದಲ ಪುಟದಿಂದ) ಅವರು ಯಾವದೇ ಮಹತ್ವದ ನಿರ್ಧಾರ ಕೈಗೊಳ್ಳದಂತೆಯೂ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇದಲ್ಲದೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ರಾಜ್ಯಪಾಲರ ವಿವೇಚನಾಧಿಕಾರ ಸರಿಯೋ ತಪ್ಪೇ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರ ಮನವಿಗೆ ಸ್ಪಂದಿಸಿ, ವಿಶ್ವಾಸಮತ ಯಾಚನೆಗೂ ಮೊದಲು ಆಂಗ್ಲೋ ಇಂಡಿಯನ್ ನಾಮ ನಿರ್ದೇಶನ ಅಥವಾ ನೇಮಕ ಬೇಡ ಎಂದು ತ್ರಿಸದಸ್ಯ ಪೀಠ ಆದೇಶಿಸಿದೆ.
ಯಡಿಯೂರಪ್ಪ ವಿಶ್ವಾಸ
ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸದ ಮಾತುಗಳನ್ನಾಡಿದರು. ಶನಿವಾರ ಸಂಜೆ 4 ಗಂಟೆ ಮೊದಲು ಸದನದಲ್ಲಿ ವಿಶ್ವಾಸ ಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಿಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, “ನಾವು ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸುತ್ತೇವೆ,” ಎಂದು ಹೇಳಿದರು.
ವಿಶ್ವಾಸ ಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ನವದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕರಂದ್ಲಾಜೆ, ‘ನಾವು ಸದನದಲ್ಲಿ ನಾಳೆ ವಿಶ್ವಾಸಮತವನ್ನು ಸಾಬೀತುಪಡಿಸುತ್ತೇವೆ. ನಾವು ಬಹುಮತ ಸಾಬೀತಿಗೆ ಸಿದ್ಧವಾಗಿದ್ದೇವೆ ಎಂದು ಹೇಳಿದರು.