ವೀರಾಜಪೇಟೆ, ಮೇ 14: ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ಆಶ್ರಯದಲ್ಲಿ 17ನೇ ವರ್ಷದ ಕ್ರೀಡಾಕೂಟವನ್ನು ತಾ. 19 ಮತ್ತು 20 ರಂದು ಜೂನಿಯರ್ ಕಾಲೇಜು ಮ್ಯೆದಾನದಲ್ಲಿ ಆಯೋಜಿಸಲಾಗಿದೆ ಎಂದು ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ರಾಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 19 ರಂದು ಸಮುದಾಯ ಬಾಂಧವರಿಗೆ ಸೀಮಿತಗೊಂಡಂತೆ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಗುವದು. ತಾ. 20 ರಂದು ಉಳಿದ ಕ್ರೀಡೆಗಳಾದ ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಹಾಗೂ ಮಕ್ಕಳಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಬಿ.ಎಂ. ಗಣೇಶ್ ಮಾತನಾಡಿ, ತಾ. 19 ರಂದು ನಡೆಯುವ ಕ್ರೀಡಾಕೂಟವನ್ನು ಬಿಟ್ಟಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಪುಚ್ಚಿಮಂಡ ಸಾಬಾ ಬೆಳ್ಳಿಯಪ್ಪ ನೆರವೇರಿಸಲಿದ್ದಾರೆ. ತಾ. 20 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ, ಕೆ.ಜಿ ಬೋಪಯ್ಯ, ಅರುಣ್ ಮಾಚಯ್ಯ, ಸಂಕೇತ್ ಪೂವಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಪ್ರಕಾಶ್ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಎಸ್ ಜನಾರ್ಧನ್, ಸದಸ್ಯ ನಾರಾಯಣ್ ಉಪಸ್ಥಿತರಿದ್ದರು.