ಮಡಿಕೇರಿ, ಮೇ 14:ಕೆದಕಲ್ ಮೋದೂರು, ಕಡಗದಾಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಿಂದಾಗ್ಗೆ ಕಾಣಿಸಿಕೊಂಡು ಸಾರ್ವಜನಿಕರಿಗೆ ಕಂಟಕವಾಗಿರುವ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಾಡಿನಿಂದ ನಾಡಿಗೆ ಧಾಲಿಯಿಡುವ ದರೊಂದಿಗೆ ಹೆದ್ದಾರಿಯಲ್ಲಿ ಕ್ರಮಿಸುವ ಮೂಲಕ ಜನತೆಯಲ್ಲಿ ಭಯ ಹುಟ್ಟಿಸಿರುವ ಈ ದೈತ್ಯ ಸೆರೆಗೆ ಸರಕಾರದ ಅನುಮತಿಯೊಂದಿಗೆ ಇಲಾಖೆಯ ಅಧಿಕಾರಿಗಳು ಪ್ರಯತ್ನಶೀಲರಾಗಿದ್ದಾರೆ.ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮೋದೂರು ಸುತ್ತಮುತ್ತ ಅರಣ್ಯಾಧಿಕಾರಿಗಳು 60ಕ್ಕೂ ಅಧಿಕ ಸಿಬ್ಬಂದಿಯೊಂದಿಗೆ ಜಾಲಾಡಿದರೂ ಯಾವದೇ ಸುಳಿವು ಲಭಿಸಲಿಲ್ಲ.

ಸೆರೆ ಸಿಕ್ಕಬೇಕಿದ್ದ ಸಲಗದ ಹೊರತಾಗಿ ಎರಡು ಆನೆಗಳು ಒಂದೆಡೆ ಹಾಗೂ ಮತ್ತೊಂದೆಡೆ ಮೂರು ಆನೆಗಳು ಕಾಣಿಸಿಕೊಂಡವು.

ಸಾಕಾನೆಗಳ ಸಹಾಯದಿಂದ ಇಂದು ಸಂಜೆ ಮಳೆಯ ಕಾರಣ ಕಾರ್ಯಾಚರಣೆ ಮೊಟಕುಗೊಳಿಸಿದ್ದು, ತಾ. 15ರಂದು (ಇಂದು) ಮುಂದುವರಿಯಲಿದೆ ಎಂದು ಇಲಾಖೆಯ ಅಧಿಕಾರಿಗಳು ಸುಳಿವು ನೀಡಿದರು. ರಾತ್ರಿ ಕೂಡ ಅರಣ್ಯ ಸಿಬ್ಬಂದಿ ಈ ಒಂಟಿ ಸಲಗದ ಚಲನ ವಲನ ಕುರಿತು ನಿಗಾವಹಿಸಲಿದ್ದಾರೆ ಎಂದು ತಿಳಿಸಿದರು.

ಇಂದಿನ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ, ಸಹಾಯಕ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ವಲಯಾಧಿಕಾರಿಗಳಾದ ಅರುಣ್ ಕುಮಾರ್, ದೇವಿ ಪ್ರಸಾದ್, ರಂಜನ್, ಅನಿಲ್ ಡಿಸೋಜ, ಸುಬ್ರಮಣ್ಯ, ವೈದ್ಯಾಧಿಕಾರಿ ಮುಜೀಬ್ ಸೇರಿದಂತೆ 60ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.