ಮಡಿಕೇರಿ, ಮೇ 14: ಇಲ್ಲಿನ ವಿಜಯ ವಿನಾಯಕ ದೇವಾಲಯ ಬಳಿ ಮಡಿಕೇರಿ ತಾಲೂಕು ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿಗೆ ಸರಕಾರದಿಂದ ಅಧಿಕೃತ ಒಪ್ಪಿಗೆ ಲಭಿಸಿದ್ದು, ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಕಾಮಗಾರಿಗೆ ಪೂರ್ವಸಿದ್ಧತೆ ನಡೆದಿದೆ. ಈಗಾಗಲೇ ಸಂಬಂಧಿಸಿದ ಕಾಮಗಾರಿಯ ಟೆಂಡರ್ ಪಡೆದಿರುವ ಬೆಂಗಳೂರಿನ ಕೆ. ಬಾಲರಾಜ್ ಮತ್ತು ಕಂಪನಿ (ಕೆಬಿಆರ್) ಕೆಲಸದಲ್ಲಿ ತೊಡಗಿದೆ.
ಈ ಹಿಂದೆ ಮಣ್ಣಿನ ಗುಣಮಟ್ಟ ಸಂಬಂಧ ಜಿಜ್ಞಾಸೆ ಹುಟ್ಟಿಕೊಂಡು ಮೈಸೂರು ಹಾಗೂ ಸುಳ್ಯದ ತಂತ್ರಜ್ಞರು ಗೊಸರು ಪ್ರದೇಶವೆಂದು ಉಲ್ಲೇಖಿಸಿತ್ತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಂ ನಿರ್ದೇಶನದಂತೆ ಸೂರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞರು ತಾಂತ್ರಿಕ ಸಲಹೆಯೊಂದಿಗೆ ಮಣ್ಣು ಪರೀಕ್ಷೆ ಬಳಿಕ ಕಟ್ಟಡ ನಿರ್ಮಾಣಕ್ಕೆ ಈ ನಿವೇಶನಕ್ಕೆ ಸಮ್ಮತಿಸಿದೆ.
ಅಲ್ಲದೆ ಸಂಬಂಧಿಸಿದ ನಿವೇಶನದಲ್ಲಿರುವ ಮಣ್ಣನ್ನು 22 ಅಡಿಗಳಷ್ಟು ಆಳಕ್ಕೆ ತೆಗೆದುಹಾಕಿ ಬದಲಾಗಿ; ಅಷ್ಟು ಆಳದಿಂದ ಅಡಿಪಾಯ ಪಿಲ್ಲರ್ ನಿರ್ಮಿಸಿ ಪುನಃ ಗಟ್ಟಿ ಮಣ್ಣು ತುಂಬುವದರೊಂದಿಗೆ ಮೂರು ಅಂತಸ್ತು ಕಟ್ಟಡ ಕಟ್ಟಬಹುದೆಂದು ಸಮ್ಮತಿ ಸೂಚಿಸಿದೆ. ಆ ಪ್ರಕಾರ ಈಗಾಗಲೇ ನಿವೇಶನ ಮಣ್ಣು 22 ಅಡಿ ಆಳದಿಂದ ಹೊರಹಾಕಲಾಗಿದೆ.
ಈ ನಡುವೆ ಮೇಲಿಂದ ಮೇಲೆ ಮಳೆಯಾಗುವದರೊಂದಿಗೆ, ಮಣ್ಣು ತೆಗೆದಿರುವ 22 ಅಡಿ ಆಳದ ಹೊಂಡದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಒಂದು ವಾರದಿಂದ 5 ಹೆಚ್.ಪಿ. ಸಾಮಥ್ರ್ಯದ 5 ಮೋಟಾರು ಯಂತ್ರಗಳನ್ನು ಬಳಸಿಕೊಂಡು ನೀರು ಹೊರಹಾಕುವ ಪ್ರಯತ್ನ ಮಾಡಲಾಗಿದೆಯಾದರೂ ಮತ್ತೆ ಮತ್ತೆ ಕೆಸರು ಮಿಶ್ರಿತ ನೀರು ತುಂಬಿಕೊಳ್ಳುತ್ತಿದೆ.
ಇಷ್ಟೆಲ್ಲ ಕಸರತ್ತು ಬಳಿಕವೂ ಸಂಜೆ ವೇಳೆಯ ಮಳೆಯಿಂದ ಇಡೀ ನಿವೇಶನದಲ್ಲಿ ಮತ್ತಷ್ಟು ಕೆಸರು ದಟ್ಟಣೆಯ ನೀರು ಶೇಖರಣೆಗೊಳ್ಳುತ್ತಿದ್ದು, ಮತ್ತೆ ಬೆಳಿಗ್ಗೆ ಕೆಲಸಕ್ಕೆ ಬರುವ ಕಾರ್ಮಿಕರು ಈ ನೀರು ಹೊರಚೆಲ್ಲುವ ಕಾಯಕದಲ್ಲೇ ಸಮಯ ಕಳೆದುಹೋಗಲಿದೆ. ಹೀಗಾಗಿ ಮಿನಿ ವಿಧಾನಸೌಧ ನಿವೇಶನ ಸುತ್ತಲೂ ಈಗ ಪ್ರತ್ಯೇಕ ಚರಂಡಿ ನಿರ್ಮಿಸಿ ಮಳೆ ನೀರು ತಡೆಯಲಾಗುತ್ತಿದೆ. ಹೀಗಿದ್ದರೂ 22 ಅಡಿ ಆಳದ ನಿವೇಶನದೊಳಗೆ ಸಂಗ್ರಹವಾಗುವ ನೀರು ಹೊರಚೆಲ್ಲಲು ಮೋಟಾರು ಯಂತ್ರ ಬಳಸಿದರೂ, ಮಳೆಯಿಂದಾಗಿ ಕೆಲಸ ಮುಂದುವರಿಸಲಾರದ ಸ್ಥಿತಿಯಲ್ಲಿ ಗುತ್ತಿಗೆದಾರರು ಹೆಣಗಾಡುವಂತಾಗಿದೆ.
ಮೂಲಗಳ ಪ್ರಕಾರ ಕಳೆದ ಒಂದು ವರ್ಷದಿಂದ ಗುತ್ತಿಗೆದಾರ, ಹಲವು ರೀತಿಯ ಕೆಲಸಗಳ ನಡುವೆ, ಈಗಾಗಲೇ ಅಂದಾಜು ರೂ. 75 ಲಕ್ಷ ವೆಚ್ಚ ಮಾಡಿದ್ದರೂ, ಯಾವದೇ ಕೆಲಸ ಕಣ್ಣಿಗೆ ಕಾಣುವಂತಿಲ್ಲ. ಈ ಪರಿಸ್ಥಿತಿ ನಡುವೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಬಿಡಿಗಾಸು ಹಣವನ್ನೂ ಬಿಡುಗಡೆಗೊಳಿಸಿಲ್ಲ.
ಅಭಿಯಂತರರ ಪ್ರತಿಕ್ರಿಯೆ: ಪ್ರಸಕ್ತ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾರ್ಯಪಾಲಕ ಸಹಾಯಕ ಅಭಿಯಂತರ ಕೃಷ್ಣಪ್ಪ, ಮಳೆಯಿಂದಾಗಿ ಕೆಲಸ ಮುಂದುವರಿಸಲು ಅಡಚಣೆಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಹವಾಮಾನ ಇಲಾಖೆಯ ಪ್ರಕಾರ ಮಳೆ ದೂರವಾಗಲಿದ್ದು, ಮುಂದಿನ ಹತ್ತು ದಿನದೊಳಗೆ 22 ಅಡಿ ಆಳದಿಂದ ಅಡಿಪಾಯ ಬಲಗೊಳಿಸಲು ಪಿಲ್ಲರ್ಗಳನ್ನು ರೂಪಿಸಲು ಪ್ರಯತ್ನಿಸುತ್ತಿರುವದಾಗಿ ವಿವರಿಸಿದ್ದಾರೆ. ಆ ವೇಳೆಗೆ ಮಳೆ ದೂರವಾದರೆ ಅಡಿಪಾಯಕ್ಕೆ ಗಟ್ಟಿಮಣ್ಣು ಸಹಿತ ಗುಂಡಿ ಮುಚ್ಚಿ ನಿವೇಶನ ಸಮತಟ್ಟುಗೊಳಿಸಿ ನೆಲ ಅಂತಸ್ತು ಕಾಮಗಾರಿ ಮುಂದುವರಿಯುವ ಆಶಯ ವ್ಯಕ್ತಪಡಿಸಿದ್ದಾರೆ.
ಮೊದಲ ಹಂತದಲ್ಲಿ ರೂ. 5 ಕೋಟಿ ಯೋಜನೆಯ ಕಟ್ಟಡದೊಂದಿಗೆ, ಹಂತ ಹಂತವಾಗಿ ಒಟ್ಟು ರೂ. 10 ಕೋಟಿ ವೆಚ್ಚದಲ್ಲಿ 3 ಅಂತಸ್ತಿನ ಮಿನಿ ವಿಧಾನಸೌಧ ತಲೆಯೆತ್ತಲಿದೆ. ಈಗಿನ ಜಿಲ್ಲಾ ಆಡಳಿತ ಭವನದ ಮಾದರಿಯಲ್ಲಿ ನೆಲ ಅಂತಸ್ತಿನ ಅಡಿ ವಾಹನ ನಿಲುಗಡೆಯೊಂದಿಗೆ ಸುಸಜ್ಜಿತ ಕಟ್ಟಡ ತಲೆಯೆತ್ತಲಿದೆ.
ಒಟ್ಟಿನಲ್ಲಿ ಈಗಾಗಲೇ ಗುತ್ತಿಗೆದಾರರು ಕಬ್ಬಿಣ, ಜಲ್ಲಿ, ಎಂಸ್ಯಾಂಡ್ (ಮರಳು) ದಾಸ್ತಾನುಗೊಳಿಸಿದ್ದರೂ ವರುಣನ ನರ್ತನ ಈ ಮಿನಿ ವಿಧಾನಸೌಧ ಕಾಮಗಾರಿಗೆ ಮತ್ತೆ ಮತ್ತೆ ಅಡ್ಡಿಯಾಗಿದೆಯಂತೆ.