ಮಡಿಕೇರಿ, ಮೇ 14: ಮಡಿಕೇರಿ ವಿಧಾನಸಭಾ ಕ್ಷೇತ್ರ 208; ವೀರಾಜಪೇಟೆ ವಿಧಾನಸಭಾ ಕ್ಷೇತ್ರ - 209ರ ಚುನಾವಣೆ ಸಂಬಂಧ ತಾ. 15ರಂದು (ಇಂದು) ಬೆಳಿಗ್ಗೆ 8 ಗಂಟೆಯಿಂದ ಇಲ್ಲಿನ ಸಂತ ಜೋಸೆಫರ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಆ ನಿಮಿತ್ತ 7 ಗಂಟೆಯಿಂದಲೇ ಬಿಗಿ ಭದ್ರತೆ ನಡುವೆ ರಾಜಕೀಯ ಅಭ್ಯರ್ಥಿಗಳು, ಏಜೆಂಟರು, ಇಲಾಖೆಯ ಮಂದಿ ಎಣಿಕೆ ಕೇಂದ್ರಕ್ಕೆ ಆಗಮಿಸುವದ ರೊಂದಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಿದ್ದಾರೆ.

ಎಣಿಕೆ ಕಾರ್ಯ ಪ್ರಾರಂಭಗೊಂಡ ಬಳಿಕ ಪ್ರತಿ ಹಂತದ ಚಿತ್ರಣವನ್ನು ಧ್ವನಿ ವರ್ಧಕದಿಂದ ಪ್ರಚಾರಪಡಿಸಲು ತಯಾರಿ ನಡೆದಿದ್ದು, ಮತ ಎಣಿಕೆ ಕೇಂದ್ರ ಸುತ್ತಮುತ್ತ ಅರೆಸೇನಾಪಡೆ ಸಹಿತ ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಕಳೆದ 2 ತಿಂಗಳಿನಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಾರ್ವತ್ರಿಕ ತಯಾರಿಯೊಂದಿಗೆ ಇದೀಗ ಅಂತಿಮ ಕ್ಷಣ ತಲಪಿದೆ. ವಿಧಾನಸಭೆ ಚುನಾವಣೆ ಸಂಬಂಧ ಮತ ಎಣಿಕೆಗೆ ನಿಯೋಜಿಸಿರುವ ಮೇಲ್ವಿಚಾರಕರು ಮತ್ತು ಸಹಾಯಕ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಮತ ಎಣಿಕೆ ಮೇಲ್ವಿಚಾರಕರು ಮತ್ತು ಸಹಾಯಕ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ

(ಮೊದಲ ಪುಟದಿಂದ) ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಾ. 15 ರಂದು ಬೆಳಿಗ್ಗೆ 6 ಗಂಟೆಗೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಹಾಜರಿದ್ದು, ಹಾಜರಾತಿಯಲ್ಲಿ ಸಹಿ ಮಾಡಿ ಮತ ಎಣಿಕೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ನಿರ್ದೇಶನ ನೀಡಿದರು.

ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ತಂಡೋಪಾದಿಯಾಗಿ ಕಾರ್ಯ ನಿರ್ವಹಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಇದೇ ರೀತಿ ಮತ ಎಣಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.

ಅಧಿಕಾರಿಗಳು ಮತ ಎಣಿಕೆ ಸಂದರ್ಭದಲ್ಲಿ ಸಂಯಮ ಪಾಲಿಸುವದರ ಜತೆಗೆ ಶಾಂತಿಯುತವಾಗಿ, ನಿಖರತೆಯಿಂದ ಮತ ಎಣಿಕೆ ಕಾರ್ಯ ಕೈಗೊಳ್ಳುವಂತೆ ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ವಿಧಾನಸಭಾ ಚುನಾವಣೆ ಸಂಬಂಧ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ತಾ. 15 ರಂದು ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆಗೆ ನಿಯೋಜಿಸಿರುವ ಮೇಲ್ವಿಚಾರಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಲಾಯಿತು.

ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಪ್ರತ್ಯೇಕವಾಗಿ ನಡೆಯಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಸಂತ ಜೋಸೆಫರ ಶಾಲೆಯ ಸಭಾಂಗಣದಲ್ಲಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಸಂತ ಜೋಸೆಫರ ಶಾಲೆಯ ಡೈನಿಂಗ್ ಹಾಲ್‍ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಮತ ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಶುರುವಾಗಲಿದ್ದು, ಸಂಬಂಧಿಸಿದ ವಿಧಾನಸಭಾ ಚುನಾವಣಾಧಿಕಾರಿ (ಆರ್‍ಒ) ಸೂಚಿಸಿದ ನಂತರ ಮತ ಎಣಿಕೆ ಆರಂಭಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ 14 ಟೇಬಲ್‍ಗಳನ್ನು ಅಳವಡಿಸಲಾಗಿದ್ದು, ತಮಗೆ ಸಂಬಂಧಿಸಿದ ವಿದ್ಯುನ್ಮಾನ ಮತಯಂತ್ರದ ಕಂಟ್ರೋಲ್ ಯೂನಿಟ್ ಎಂಬುದನ್ನು ಖಾತರಿಪಡಿಸಿಕೊಂಡು ಮತ ಎಣಿಕೆ ಕಾರ್ಯ ಆರಂಭಿಸಬೇಕು ಎಂದು ಅವರು ಸೂಚನೆ ನೀಡಿದರು.

ಮತ ಎಣಿಕೆ ಕೇಂದ್ರದ ಸುತ್ತ ಪ್ಯಾರ ಮಿಲಿಟರಿ ಪಡೆಯ ಬಂದೋಬಸ್ತ್ ಮಾಡಲಾಗಿದ್ದು, ಮತ ಎಣಿಕೆಗೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ನೀಡಲಾಗಿರುವ ಗುರುತಿನ ಚೀಟಿ(ಪಾಸ್)ನ್ನು ಕಡ್ಡಾಯವಾಗಿ ತರಬೇಕು. ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೊಬೈಲನ್ನು ಬಳಸಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಮಾಸ್ಟರ್ ತರಬೇತಿದಾರ ಷಂಶುದ್ದೀನ್ ಮತ ಎಣಿಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಮಾರ್ಗದರ್ಶನ ಬಗ್ಗೆ ಮಾಹಿತಿ ನೀಡಿದರು.

ವಿಧಾನಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ ನಗರದ ಸಂತ ಜೋಸೆಫರ ಶಾಲೆಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಚುನಾವಣಾಧಿಕಾರಿ ರಮೇಶ್ ಪಿ.ಕೊನರೆಡ್ಡಿ, ಡಿವೈಎಸ್‍ಪಿ ಸುಂದರರಾಜ್ ಇತರರು ಭೇಟಿ ನೀಡಿ, ಪರಿಶೀಲನೆ ಮಾಡಿದರು.