ಮಡಿಕೇರಿ, ಮೇ 14: ರಾಜ್ಯ ವಿಧಾನ ಸಭೆಗೆ ಮತ್ತೊಂದು ಪ್ರತಿಷ್ಠಿತವಾದ ಚುನಾವಣೆ ನಡೆದಿದೆ. ತಾ. 12ಕ್ಕೆ ಮತಸಮರ ಮುಗಿದಿದ್ದು, ಎಲ್ಲರ ಚಿತ್ತ ಇದೀಗ ತಾ. 15 ರಂದು (ಇಂದು) ಪ್ರಕಟಗೊಳ್ಳಲಿರುವ ಫಲಿತಾಂಶದತ್ತ ನೆಟ್ಟಿದೆ. ರಾಜಕೀಯವಾಗಿ ಕೊಡಗು ವಿಶೇಷ ಗಮನ ಸೆಳೆದಿರುವ ಜಿಲ್ಲೆ. ಇದು ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆಯಾದರೂ ರಾಜಕೀಯದಲ್ಲಿ ವಿಶೇಷ ಸುದ್ದಿ ಮಾಡಿದೆ.ಈ ಪುಟ್ಟ ಜಿಲ್ಲೆಯ ಪ್ರತಿನಿಧಿಗಳಾದವರು ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದರು. ವಿಧಾನಸಭೆಯ ಉಪಸಭಾಧ್ಯಕ್ಷರು, ಸಭಾಧ್ಯಕ್ಷರು ಮುಖ್ಯಮಂತ್ರಿ ಸ್ಥಾನದಷ್ಟೇ ಪ್ರಭಾವ ಹೊಂದಿದ್ದ ಸಚಿವ ರಾಗಿದ್ದವರು ಕೊಡಗಿನಲ್ಲಿದ್ದಾರೆ. 1978ರಲ್ಲಿ ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದರೆ, 2008ರಲ್ಲಿ ಕೆ.ಜಿ. ಬೋಪಯ್ಯ ಅವರು ಉಪಸಭಾಪತಿಗಳು, ಸಭಾಧ್ಯಕ್ಷ ರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಜೆ.ಎಚ್ ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಯಂ.ಸಿ. ನಾಣಯ್ಯ ಅವರು ಸಚಿವರಾಗಿ ಮುಖ್ಯ ಮಂತ್ರಿಗಳಷ್ಟೇ ಪ್ರಭಾವ ಹೊಂದಿದ್ದರು. ಮುಖ್ಯ ಮಂತ್ರಿಯಾಗಿದ್ದ ಅಭ್ಯರ್ಥಿ ಯೊಬ್ಬರನ್ನು ಮತ್ತೊಂದು ಚುನಾವಣೆಯಲ್ಲಿ ಸೋಲಿಸಿದವರೂ ಕೊಡಗಿನವರೇ ಆದ ಬಿ.ಎ. ಜೀವಿಜಯ ಅವರು ಈ ಸಂದರ್ಭದಲ್ಲಿ ಇವರು ಅರಣ್ಯ ಸಚಿವರಾಗಿಯೂ ಹೆಸರು ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರುಗಳಾಗಿಯೂ ಯಂ.ಸಿ. ನಾಣಯ್ಯ ಹಾಗೂ ಎ.ಕೆ. ಸುಬ್ಬಯ್ಯ ಅವರು ವಿಶೇಷ ಗಮನ ಸೆಳೆದವರು ಈ ಹಿಂದೊಮ್ಮೆ ಪುಟ್ಟ ಕೊಡಗು ಜಿಲ್ಲೆ ಒಂದೇ

(ಮೊದಲ ಪುಟದಿಂದ) ಅವಧಿಯಲ್ಲಿ ಮೂವರು ಸಚಿವರನ್ನು ಹೊಂದಿದ್ದು ಕೊಡಗಿನ ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ.

ಎಂ.ಎಂ. ನಾಣಯ್ಯ, ಟಿ.ಜಾನ್, ಸುಮಾವಸಂತ್ ಒಂದೇ ಅವಧಿಯಲ್ಲಿ ರಾಜ್ಯದ ಸಚಿವರಾಗಿದ್ದರು. ಇನ್ನು ಎಂ.ಎಂ. ಬೆಳ್ಳಿಯಪ್ಪ, ಡಿ.ಎ. ಚಿಣ್ಣಪ್ಪ ಅವರುಗಳು ಸಹ ಕೊಡಗು ಕರ್ನಾಟಕದೊಂದಿಗೆ ವಿಲೀನಗೊಂಡ ಬಳಿಕ ಸಚಿವರಾಗಿದ್ದರು. 2008ರ ಅವಧಿಯಲ್ಲಿ ಕೆ.ಜಿ. ಬೋಪಯ್ಯ ಅವರು ಸಭಾಧ್ಯಕ್ಷರಾಗಿದ್ದ ಅವಧಿಯಲ್ಲೇ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಹ ರಾಜ್ಯದ ಸಚಿವರಾಗಿ ಕೆಲಸ ನಿರ್ವಹಿಸಿರುವದು ಜಿಲ್ಲೆಯ ರಾಜಕೀಯ ಐತಿಹ್ಯಗಳಲ್ಲಿ ಒಂದು. ಪ್ರಸ್ತುತ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರುಗಳು ವಿಧಾನ ಪರಿಷತ್‍ನಲ್ಲಿ ಸದಸ್ಯರು ಗಳಾಗಿರುವದು ಕೂಡ ವಿಶೇಷವಾದದ್ದು. ಹಾಲಿ ಅಭ್ಯರ್ಥಿ ಅರುಣ್ ಮಾಚಯ್ಯ ಅವರು ಕೂಡ ಪಕ್ಷೇತರವಾಗಿ ಸ್ಪರ್ಧಿಸಿ ಜಯಗಳಿಸಿದ್ದು, ಅಲ್ಲದೆ ಇವರು ಜನಪ್ರತಿನಿಧಿಯಾಗಿ, ಜನಪ್ರತಿನಿಧಿಗಳ ಕ್ರೀಡೆಯಲ್ಲಿ ಕರಾಟೆ ಪಟುವಾಗಿಯೂ ಗುರುತಿಸಿಕೊಂಡವರು. ಹಳೆಯ ನೆನಪುಗಳನ್ನು ಬದಿಗೊತ್ತಿದ್ದರೆ, ಡಿ.ಎಸ್. ಮಾದಪ್ಪ, ಹೆಚ್.ಡಿ. ಬಸವರಾಜು ಅವರುಗಳ ಶಾಸಕರಾಗಿದ್ದು, ಎಲ್ಲರ ನೆನಪಿನಲ್ಲಿದೆ.

2018ರ ಚುನಾವಣೆಯ ಹುರಿಯಾಳುಗಳು

2018ರಲ್ಲಿ ನಡೆದಿರುವ ಈ ಮತ ಸಮರ ಮತ್ತೊಂದು ಕೌತುಕದ ಕದನವಾಗಿದೆ. 2004ರ ತನಕ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದ ಕೊಡಗು 2008ರಿಂದ ಮಡಿಕೇರಿ ಹಾಗೂ ವೀರಾಜಪೇಟೆ ಈ ಎರಡು ಕ್ಷೇತ್ರಕ್ಕೆ ಸೀಮಿತವಾಗಿದ್ದು, ಈ ಎರಡು ಚುನಾವಣೆಯಲ್ಲಿಯೂ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಶಾಸಕರುಗಳಾಗಿದ್ದರು.

ಇದೀಗ ನಡೆದಿರುವ ಕದನದಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವವರಲ್ಲಿ ಬಿ.ಎ. ಜೀವಿಜಯ ಹಾಗೂ ಅಪ್ಪಚ್ಚುರಂಜನ್ ಅವರಿಬ್ಬರು ಮಾಜಿ ಸಚಿವರುಗಳು. ಕಾಂಗ್ರೆಸ್‍ನ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರು ಈ ಹಿಂದೆ ಜಿ.ಪಂ. ಅಧ್ಯಕ್ಷೆಯಾಗಿ ರಾಜ್ಯದ ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದವರು. ಇವರೊಂದಿಗೆ 8 ಪಕ್ಷೇತರರೂ ಇದ್ದಾರೆ. ಇನ್ನು ವೀರಾಜಪೇಟೆ ಕ್ಷೇತ್ರದತ್ತ ಬಂದರೆ, ಇಲ್ಲೂ ಎದುರಾಳಿಗಳು ಘಟಾನುಘಟಿಗಳೇ... ಕೆ.ಜಿ. ಬೋಪಯ್ಯ ಅವರು ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕರಾದರೆ, ಕಾಂಗ್ರೆಸ್‍ನ ಸಿ.ಎಸ್. ಅರುಣ್ ಮಾಚಯ್ಯ ಅವರು ಮಾಜಿ ಎಂಎಲ್‍ಸಿಯಾಗಿದ್ದಾರೆ. ತಮ್ಮ ಹೋರಾಟ ಹಾಗೂ ವಿಶೇಷತೆ ಮೂಲಕ ಜೆಡಿಎಸ್‍ನ ಸಂಕೇತ್ ಪೂವಯ್ಯ ಅವರು ಇವರ ನಡುವಿನ ಮತ್ತೋರ್ವ ಸ್ಪರ್ಧಿಯಾಗಿದ್ದು, ಕ್ಷೇತ್ರದಲ್ಲಿ ಇನ್ನೂ ಮೂವರು ಪಕ್ಷೇತರರಾಗಿದ್ದಾರೆ.

ಈಗಾಗಲೇ ತಾ. 12 ರಂದು ಮತ ಸಮರ ಮುಗಿದು ಹೋಗಿದ್ದು, ಜಿಲ್ಲೆಯಲ್ಲಿ ದಾಖಲೆಯ ಮತದಾನವೂ ಆಗಿದೆ. ಈ ಎಲ್ಲಾ ಅಭ್ಯರ್ಥಿಗಳ ಬಗ್ಗೆ ಮತದಾರರು ನೀಡಿರುವ ತೀರ್ಪು ತಾ. 15ರಂದು (ಇಂದು) ಬಹಿರಂಗವಾಗಲಿದೆ. ಈ ಮೂಲಕ ಕಳೆದ ಹಲವು ಸಮಯಗಳಿಂದ ತೀವ್ರ ಕುತೂಹಲ ಸೃಷ್ಟಿಸಿದ್ದ ರಾಜಕೀಯ ಏಳು - ಬೀಳುವಿನ ವಿಚಾರಕ್ಕೆ ತೆರೆ ಬೀಳಲಿದೆ. ಘಟಾನುಘಟಿ ಅಭ್ಯರ್ಥಿಗಳೇ ಸ್ಪರ್ಧಾ ಕಣದಲ್ಲಿರುವದರಿಂದ ಜನತೆಯಲ್ಲಿ ಈ ಬಾರಿ ಜಯಗಳಿಸುವವರು ಯಾರು ಎಂಬ ಕುತೂಹಲ ಹೆಚ್ಚಿದೆ. ತಾ. 15ರ ಅಪರಾಹ್ನದೊಳಗೆ ಘಟಾನುಘಟಿಗಳ ಸ್ಪರ್ಧಿಗಳಲ್ಲಿ ಶಾಸಕ ಪಟ್ಟ ಅಲಂಕರಿಸುವವರ್ಯಾರು ಎಂಬ ಉತ್ತರ ದೊರೆಯಲಿದೆ.