ಕೂಡಿಗೆ, ಮೇ 11: ಹಾರಂಗಿ ಅಣೆಕಟ್ಟೆಯಿಂದ ಕಣಿವೆಯವರೆಗೆ ಮುಖ್ಯ ನಾಲೆಯಾದ ಹಾರಂಗಿ ನಾಲೆಯಿಂದ ಹುದುಗೂರು ಸಮೀಪವಿರುವ ಸೇತುವೆ ಹಾಗೂ ಹುದುಗೂರು ತಿರುವಿನಲ್ಲಿ ಹಳ್ಳಕ್ಕೆ ನೀರು ಹರಿದು ಪೋಲಾಗುತ್ತಿದೆ. ಅಲ್ಲದೆ, ನಾಲೆಗೆ ಅಳವಡಿಸಿರುವ ಸೇತುವೆಯು ನೀರಿನ ಒತ್ತಡದಿಂದ ಬೀಳುವ ಹಂತ ತಲಪುವಂತಾಗಿದ್ದು, ಹುದುಗೂರು ತಿರುವಿಗೆ ಅಳವಡಿಸಿರುವ ಕಾಂಕ್ರೀಟ್‍ನ ಕಟ್ಟಡವು ಬಿರುಕುಗೊಂಡಿರುವದರಿಂದ ಹಳ್ಳಕ್ಕೆ ನೀರು ಹೆಚ್ಚಾಗಿ ಪೋಲಾಗುತ್ತಿದೆ.

ನೀರಿನ ಒತ್ತಡದಿಂದಾಗಿ 1995 ರಲ್ಲಿ ಒಂದು ಬಾರಿ ಈ ಸ್ಥಳದಲ್ಲಿ ಕಟ್ಟಡ ಒಡೆದು ಕೆಳಭಾಗದ ರೈತರುಗಳ ಬೆಳೆ ನಷ್ಟವಾದ ಹಿನ್ನೆಲೆ ಪರಿಹಾರವನ್ನು ಒದಗಿಸಲಾಗಿತ್ತು. ಆದರೆ ಇದೀಗ ಅದೇ ಸ್ಥಳದಲ್ಲಿ ಬಿರುಕುಗೊಂಡು ನಾಲೆಯ ಸೋರಿಕೆಯಿಂದ ನೀರು ಹರಿಯುತ್ತಿದ್ದು, ಇದರಿಂದ ಅಪಾಯಗಳೇ ಹೆಚ್ಚಿದೆ.

ಕಾವೇರಿ ನೀರಾವರಿ ನಿಗಮದವರು ಇದರ ಸಮೀಪದಲ್ಲಿ ಸ್ವಲ್ಪಮಟ್ಟಿಗೆ ಕಾಮಗಾರಿಯನ್ನು ನಿರ್ವಹಿಸಿದ್ದು, ನಾಲೆಯ ಎರಡು ಕಡೆಗಳಲ್ಲಿ ಕಾಂಕ್ರೀಟಿಕರಣ ಮಾಡದೆ ಹಾಗೂ ಮಳೆ-ಗಾಳಿಯಿಂದ ನಾಲೆಗಳಲ್ಲಿ ಮರಗಳು ಬಿದ್ದು ಕೆಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರ ಕಾಮಗಾರಿಯನ್ನು ನಿರ್ವಹಿಸುವಂತೆ ಹಲವು ಬಾರಿ ರಾಜ್ಯಮಟ್ಟದ ನೀರಾವರಿ ಆಯುಕ್ತರಿಗೆ ಮನವಿ ಮಾಡಿ ಪತ್ರ ವ್ಯವರಿಸಿದ್ದರೂ, ಇದಕ್ಕೆ ಅಧಿಕಾರಿಗಳು ಸ್ಪಂದಿಸಿಲ್ಲ ಹಾಗೂ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ ಆರೋಪಿಸಿದ್ದಾರೆ.

ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದರತ್ತ ಗಮನಹರಿಸಿ ಬಿರುಕು ಬಿಟ್ಟಿರುವ ಕಟ್ಟಡವನ್ನು ಶೀಘ್ರವಾಗಿ ದುರಸ್ತಿ ಪಡಿಸಬೇಕೆಂದು ಈ ವ್ಯಾಪ್ತಿಯ ಹಾಗೂ ರೈತರು ಆಗ್ರಹಿಸಿದ್ದಾರೆ.