ಮಡಿಕೇರಿ, ಮೇ 11: ಕೊಡವ ಬೈ ರೇಸ್ ಅನ್ವಯ ಕೊಡಗಿನ ಮೂಲ ಜನಾಂಗವಾದ ಕೊಡವರ ಹಾಗೂ ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ನೀಡಿರುವದಕ್ಕೆ ಹಲವು ದಾಖಲೆಗಳಿವೆ. ಆದರೆ ವೈ.ಕೆ. ಚೇತನ್ ಎಂಬ ವ್ಯಕ್ತಿ ಕೊಡವರು ಹಾಗೂ ಕೊಡಗಿನ ಜಮ್ಮಾ ಹಿಡುವಳಿದಾರರ ಕೋವಿ ವಿನಾಯಿತಿ ಹಕ್ಕನ್ನು ರದ್ದುಪಡಿಸುವಂತೆ ಈ ಹಿಂದೆ ದಾವೆ ಹೂಡಿ ವಿಚಾರವನ್ನು ಕಾನೂನಿನ ಮೂಲಕವೇ ತಿಳಿಯುವಂತಾಯಿತು.

ಆದರೆ ಕೊಡವರ ಕೋವಿ ಹಕ್ಕಿನ ವಿಚಾರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮರು ಪ್ರಶ್ನಿಸಿ ಕೊಡವರನ್ನು ಕೆಣಕುವ ಕೆಲಸ ಮಾಡುತ್ತಿರುವದನ್ನು ಕೊಡವ ಮಕ್ಕಡ ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆ ತಿಳಿಸಿದೆ.

ಸಂವಿಧಾನದಲ್ಲಿ ಆಯಾಯ ಜನಾಂಗಕ್ಕೆ ಅದರದ್ದೇ ಆದ ಕೆಲವೊಂದು ನಿಯಮ, ವಿನಾಯಿತಿಯನ್ನೆಲ್ಲ ನೀಡಿದೆ. ಆದರೆ ನಾವು ಮೂಲನಿವಾಸಿಗಳು ನಮಗೂ ಕೊಡಗಿನ ಜಮ್ಮ ಹಿಡುವಳಿದಾರರಾದ ಕೊಡವರ ಹಕ್ಕು ಬಾದ್ಯತೆ ನೀಡಬೇಕೆಂದು ಕೇಳುತಿರುವದರಲ್ಲಿ ಯಾವದೇ ಅರ್ಥವಿಲ್ಲ. ಅಜ್ಜ-ಮುತ್ತಜ್ಜರ ಕಾಲದಿಂದಲೇ ಆಚಾರ, ವಿಚಾರ, ಹುಟ್ಟಿನಿಂದಿಡಿದು ಸಾವಿನವರೆಗೂ ಕೊಡವರು ತಿರಿತೋಕ್ (ಬತ್ತಿಕೋವಿ)ನ್ನು ಬಳಸುತಿದ್ದರು. ನಂತರ ಆಡಳಿತಕ್ಕೆ ಬಂದ ಬ್ರಿಟೀಷರು ಕೊಡವರು ಬಳಸುವ ಕೋವಿಗೆ ಕೊಡವ ಬೈರೇಸ್ ಅನ್ವಯ ಬಂದೂಕು ವಿನಾಯಿತಿಯನ್ನು ನೀಡಲಾಯಿತು. ಸರಕಾರ ಆಡಳಿತಕ್ಕೆ ಬಂದ ನಂತರ ಬ್ರಿಟೀಷರ ಆದೇಶವನ್ನೇ ಮುಂದುವರಿಸಲಾಯಿತು.

ಕೊಡಗಿನಲ್ಲಿ ಹಲವು ಜನಾಂಗವು ಅನ್ಯೋನ್ಯತೆಯಿಂದ ಬದುಕುತ್ತಿದ್ದು, ಒಬ್ಬರ ಸ್ವಾರ್ಥಕ್ಕೆ ಜನಾಂಗದ ನಡುವೆ ದ್ವೇಷ ಹುಟ್ಟುವಂತಾಗಿದೆ. ಕೊಡವ ಸಮಾಜಗಳು, ಕೊಡವ ಸಮಾಜಗಳ ಒಕ್ಕೂಟ, ಅಖಿಲ ಕೊಡವ ಸಮಾಜ ಚರ್ಚಿಸಿ ಕಾನೂನಿನ ಮೂಲಕ ಹೋರಾಡಿ ಕೋವಿ ಹಕ್ಕಿನ ಹೋರಾಟಕ್ಕೆ ಮುಂದಾಗಿವೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಉಪಾಧ್ಯಕ್ಷ ಬಾಳೆಯಡ ಪ್ರತೀಶ್ ಪೂವಯ್ಯ, ಕಾರ್ಯದರ್ಶಿ ಪುತ್ತರಿರ ಕಾಳಯ್ಯ, ಖಜಾಂಚಿ ಅಮ್ಮಾಟಂಡ ಮೇದಪ್ಪ, ನಿರ್ದೇಶಕರುಗಳಾದ ಅಮ್ಮಾಟಂಡ ಬೋಪಣ್ಣ, ಮಡ್ಲಂಡ ಮೋನಿಶ್, ಪುತ್ತರಿರ ಶಿವು ನಂಜಪ್ಪ, ಪೊನ್ನೋಲತಂಡ ವಿನೋದ್ ಹಾಗೂ ಸದಸ್ಯರು ತಿಳಿಸಿದ್ದಾರೆ.