ಮಡಿಕೇರಿ, ಮೇ 11: ತಾ. 26.1.2015 ರಂದು ಸೋಮವಾರಪೇಟೆಯ ಚಿಕ್ಕಹರದೆ ಜಂಬೂರು ಗ್ರಾಮದಲ್ಲಿ ಮಾದಾಪುರ ಇಗ್ಗೋಡ್ಲು ಗ್ರಾಮದ ನಿವಾಸಿ ದಿ. ಮೋಹನ್‍ದಾಸ್ ಮಗ ಬಿಪಿನ್‍ದಾಸ್ ಎಂಬಾತ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ದಿಲೀಪ್ ಪ್ರಕಾಶನು ಮದುವೆಯಾದ ಬಗ್ಗೆ ದ್ವೇಷದಿಂದ ಅದೇ ದಿನ ರಾತ್ರಿ ಆಕೆಯ ಮನೆಯ ಬಳಿ ಮಾರುತಿ ಓಮ್ನಿಯಲ್ಲಿ ಕಾಯುತ್ತಾ ಕುಳಿತಿದ್ದು, ಮಧ್ಯರಾತ್ರಿ 2 ಗಂಟೆಗೆ ಆಕೆಯು ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಾಗ ಆಕೆಯ ಹಿಂದೆ ದಿಲೀಪ್ ಪ್ರಕಾಶನೂ ಬಂದಿದ್ದಾನೆ.

ಆರೋಪಿ ಬಿಪಿನ್‍ದಾಸ್‍ನು ಆತನನ್ನು ಕುರಿತು ತಾನು ಮದುವೆ ಆಗಬೇಕಾಗಿದ್ದ ಹುಡುಗಿಯನ್ನು ನೀನು ಮದುವೆ ಆಗಿದ್ದೀಯ ಎಂದು ಅವಾಚ್ಯವಾಗಿ ಬೈದು, ನಿನ್ನನ್ನು ಕೊಲ್ಲದೆ ಬಿಡುವದಿಲ್ಲ ಎಂದು ದಿಲೀಪ್‍ನನ್ನು ಕೊಲೆ ಮಾಡುವ ಉದ್ದೇಶದಿಂದ ಮಾರುತಿ ವ್ಯಾನನ್ನು ಮುಂದಕ್ಕೆ ಚಲಾಯಿಸಿ ಅವನಿಗೆ ಗುದ್ದಿ ಸೊಂಟದ ಭಾಗಕ್ಕೆ ಹಾಗೂ ಮರ್ಮಾಂಗಕ್ಕೆ ಮಾರಣಾಂತಿಕ ಗಾಯ ಪಡಿಸಿದ್ದಾನೆ. ಅಲ್ಲದೆ ಎರಡೂ ಕಾಲುಗಳಿಗೆ ತೀವ್ರವಾಗಿ ಗಾಯಪಡಿಸಿ ಕೊಲೆ ಮಾಡಲು ಯತ್ನಿಸಿರುವದಾಗಿ ಆರೋಪಿತನ ವಿರುದ್ಧ, ಸೋಮವಾರಪೇಟೆ ಪೊಲೀಸ್ ಉಪಾಧೀಕ್ಷಕರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಜಿಲ್ಲಾ ಮತ್ತು ಸೆಷನ್ಸ್ ಹೆಚ್ಚುವರಿ ನ್ಯಾಯಾಲಯ, ಮಡಿಕೇರಿಯಲ್ಲಿ ನಡೆದಿದ್ದು, ಆರೋಪಿ ಬಿಪಿನ್‍ದಾಸ್ ದಿಲೀಪ್ ಪ್ರಕಾಶನನ್ನು ಕೊಲೆ ಮಾಡಲು ಪ್ರಯತ್ನಿಸಿರುವದು ಸಾಬೀತಾಗಿರುವ ಕಾರಣ ಆರೋಪಿತನಿಗೆ ಶಿಕ್ಷೆ ವಿಧಿಸಿ ಡಿ. ಪವನೇಶ್ ತೀರ್ಪು ನೀಡಿರುತ್ತಾರೆ.

ಸದರಿ ತೀರ್ಪಿನ ಮೇರೆಗೆ ಮಾರುತಿ ವ್ಯಾನ್ ಡಿಕ್ಕಿಪಡಿಸಿ ದಿಲೀಪ್ ಪ್ರಕಾಶ್‍ನನ್ನು ಕೊಲೆ ಮಾಡಲು ಯತ್ನಿಸಿದ ಅಪರಾಧಕ್ಕಾಗಿ ಆರೋಪಿತನಿಗೆ 7 ವರ್ಷಗಳ ಕಠಿಣ ಕಾರಾಗೃಹ ವಾಸವನ್ನು ಮತ್ತು ರೂ. 20 ಸಾವಿರ ದಂಡವನ್ನು ಪಾವತಿಸಲು ಆದೇಶಿಸಿದ್ದಾರೆ. ಪಾವತಿಯಾಗುವ ದಂಡದ ಹಣದಲ್ಲಿ ರೂ. 15 ಸಾವಿರವನ್ನು ಗಾಯಾಳು ದಿಲೀಪ್ ಪ್ರಕಾಶನಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದರು.