ಮಡಿಕೇರಿ, ಮೇ 11: ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ ಇಂದು ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಸಿಬ್ಬಂದಿಗಳ ಸಹಿತ ರವಾನಿಸಲಾಯಿತು. ತಾ. 12ರಂದು (ಇಂದು) ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ನಡೆಯಲಿರುವ ಮತದಾನ ಸಂಬಂಧ ಎಲ್ಲಾ ರೀತಿ ಪೂರ್ವ ತಯಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ 90 ಮಾರ್ಗಗಳೊಂದಿಗೆ 269 ಮತಗಟ್ಟೆಗಳಿಗೆ ತಲಾ ಐವರು ಮತಗಟ್ಟೆ ಸಿಬ್ಬಂದಿಯ ಸಹಿತ, ರಕ್ಷಣೆಗಾಗಿ ಅರೆಸೇನಾ ಪಡೆ, ಪೊಲೀಸ್, ಗೃಹ ರಕ್ಷಕ ಹಾಗೂ ಕೇಂದ್ರ ಮೀಸಲು ಶಸಸ್ತ್ರ ಸಿಬ್ಬಂದಿಯ ತಂಡವನ್ನು ಎಲ್ಲಾ ಮತಗಟ್ಟೆಗಳಿಗೆ ಬೆಂಗಾವಲಿನಲ್ಲಿ ಕಳುಹಿಸಲಾಯಿತು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳನ್ನು ನಗರದ ಸಂತ ಜೋಸೆಫರ ವಿದ್ಯಾಲಯ ಆವರಣದಲ್ಲಿ ಪರಿಶೀಲಿಸಿ ಸೂಕ್ತ ಸಾಮಗ್ರಿಯೊಂದಿಗೆ ಪೂರ್ವ ನಿರ್ಧರಿತ ಮಾರ್ಗಗಳಲ್ಲಿ ರವಾನಿಸಲಾಯಿತು. ಪ್ರತಿಯೊಬ್ಬರು ಸಿಬ್ಬಂದಿಗೆ

(ಮೊದಲ ಪುಟದಿಂದ) ಸಮರ್ಪಕ ಮಾಹಿತಿ ನೀಡಿ ತಾ. 12ರ ಮತದಾನ ವೇಳೆ ಯಾವದೇ ಲೋಪ ಅಥವಾ ಗೊಂದಲಕ್ಕೆ ಅವಕಾಶವಾಗದಂತೆ ಸ್ಪಷ್ಟ ಸೂಚನೆ ನೀಡಲಾಯಿತು.

ಅದೇ ರೀತಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ 269 ಮತಗಟ್ಟೆಗಳಿಗೆ ಸೂಕ್ತ ರೀತಿಯಲ್ಲಿ, ಅಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ತಿಳುವಳಿಕೆ ನೀಡುವ ಮೂಲಕ ಸಿಬ್ಬಂದಿಗಳನ್ನು ಮತಯಂತ್ರಗಳೊಂದಿಗೆ ಇತರ ಸಾಮಗ್ರಿ ನೀಡಿ ಭದ್ರತಾ ವ್ಯವಸ್ಥೆಯಡಿ ಕಳುಹಿಸಲಾಯಿತು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳಿಗೆ ತೆರಳಿದ ಎಲ್ಲಾ ಸಿಬ್ಬಂದಿಗಳಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟೋಪಚಾರದೊಂದಿಗೆ ಕಳುಹಿಸಿಕೊಡಲಾಯಿತು. ಅಲ್ಲದೆ ಮತಗಟ್ಟೆಗಳಿಗೆ ಕ್ಷೇಮವಾಗಿ ತಲಪಿರುವ ಬಗ್ಗೆ ಖುದ್ದಾಗಿ ಅಧಿಕಾರಿಗಳ ತಂಡ ತೆರಳಿ ಖಾತರಿಪಡಿಸಿಕೊಂಡು, ಬಳಿಕ ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ನೀಡಿದರು.

ಜಿಲ್ಲಾಧಿಕಾರಿ ವಿವರಣೆ: ತಾ. 12ರಂದು (ಇಂದು) ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಜಿಲ್ಲೆಯ ಜನತೆ ಶಾಂತಿಯುತ ಮತದಾನಕ್ಕೆ ಎಲ್ಲಾ ಕ್ರಮ ಕೈಗೊಂಡಿದ್ದು, ಆಕಸ್ಮಿಕ ಮಳೆ ಬಂದರೂ ಸೂಕ್ತ ರಕ್ಷಣೆಗಾಗಿ ‘ರಕ್ಷಾ ಕವಚ’ ಒದಗಿಸಿರುವದಾಗಿ ವಿವರಿಸಿದರು. ಅಲ್ಲದೆ ಎಲ್ಲಾ ಮತಗಟ್ಟೆಗಳಲ್ಲಿ ಸಿಬ್ಬಂದಿಗಳಿಗೆ ಸೂಕ್ತ ರೀತಿಯಲ್ಲಿ ಆಹಾರ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಶ್ರೀವಿದ್ಯಾ ತಿಳಿಸಿದರು. ಅಲ್ಲದೆ ಆರೋಗ್ಯ ಸಂಬಂಧ ವೈದ್ಯಕೀಯ ಕಿಟ್‍ಗಳನ್ನು ಪ್ರತಿ ಮತಗಟ್ಟೆಗೆ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಎಸ್ಪಿ ಮಾಹಿತಿ: ಎಸ್ಪಿ ರಾಜೇಂದ್ರ ಪ್ರಸಾದ್ ಹಾಗೂ ಚುನಾವಣಾ ನೋಡಲ್ ಪೊಲೀಸ್ ಅಧಿಕಾರಿ ಕೆ.ಎಸ್. ಸುಂದರರಾಜ್ ಮುಂಜಾಗ್ರತಾ ಕ್ರಮಗಳ ಕುರಿತಾಗಿ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದರು. ಅರೆಸೇನಾ ಪಡೆ, ಕರ್ನಾಟಕ ಪೊಲೀಸ್ ಮೀಸಲು ಪಡೆ, ಗಡಿ ಭದ್ರತಾ ಪಡೆ, ಗೃಹರಕ್ಷಕದಳ ಸಹಿತ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವದಾಗಿ ಸ್ಪಷ್ಟಪಡಿಸಿದರು.

ವ್ಯಾಪಕ ಕಣ್ಗಾವಲು: ಭದ್ರತಾ ವ್ಯವಸ್ಥೆ ಕುರಿತು ವಿವರಿಸಿದ ವರಿಷ್ಠರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಎಲ್ಲಾ 14 ತಪಾಸಣಾ ಗೇಟ್‍ಗಳಲ್ಲಿ ಕಣ್ಗಾವಲು ಇರಿಸಿದ್ದು, ಯಾವದೇ ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶವಾಗದಂತೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಕ್ಷಣಾ ಪಡೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಏಳು ಮಂದಿ ಡಿವೈಎಸ್ಪಿಗಳು, 14 ಸರ್ಕಲ್ ಇನ್ಸ್‍ಪೆಕ್ಟರ್‍ಗಳು, 23 ಸಬ್‍ಇನ್ಸ್‍ಪೆಕ್ಟರ್ ಗಳು, 78 ಎಎಸ್‍ಐಗಳು, ಅರೆಸೇನಾಪಡೆ, ಗಡಿ ಭದ್ರತಾಪಡೆ, ಕರ್ನಾಟಕ ಮೀಸಲು ಪೊಲೀಸ್ ಸಹಿತ ಒಟ್ಟು 1200ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಯೊಂದಿಗೆ ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು. ಈ ಸಂಬಂಧ ಬೆಂಗಾವಲು ಪಡೆಯೊಂದಿಗೆ 70 ಮೊಬೈಲ್ ತಂಡದಲ್ಲಿ ಅಧಿಕಾರಿಗಳು ಸಂಚರಿಸಲಿದ್ದಾರೆ ಎಂದು ಸುಳಿವು ನೀಡಿದರು.

ಅಂಚೆ ಮತದಾನ: ಇಂದು ಬೆಳಿಗ್ಗೆಯಿಂದಲೇ ನಗರದ ಸಂತ ಜೋಸೆಫರ ಶಾಲಾ ಕೊಠಡಿಯಲ್ಲಿ ಕರ್ತವ್ಯ ನಿರತ ವಿವಿಧ ಇಲಾಖೆಗಳ ಚುನಾವಣಾ ಸಿಬ್ಬಂದಿ ತಮ್ಮ ತಮ್ಮ ಮತಗಳನ್ನು ಅಂಚೆ ಮುಖಾಂತರ ರವಾನಿಸಿದರು.

ಈ ಸಂಬಂಧ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 141 ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 138 ಅಂಚೆ ಮತಗಳು ರವಾನಿಸಲ್ಪಟ್ಟಿತು.

100 ಕಡೆ ಬಿಗುಕ್ರಮ: ಜಿಲ್ಲೆಯಲ್ಲಿ ಈ ಹಿಂದೆ ನಕ್ಸಲರು ಕಾಣಿಸಿಕೊಂಡ ಪ್ರದೇಶಗಳ ಸಹಿತ ಗ್ರಾಮೀಣ ಹಾಗೂ ತೀರಾ ಕುಗ್ರಾಮಗಳ ಮತಗಟ್ಟೆಗಳನ್ನು ಒಳಗೊಂಡಂತೆ, 100 ಕಡೆಗಳಲ್ಲಿ ವಿಶೇಷ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.