ಮರಗೋಡು, ಮೇ 5: ಮರಗೋಡು ವಿನ ಶ್ರೀ ಶಿವ-ಪಾರ್ವತಿ ದೇವಾಲಯದಲ್ಲಿ ತಾ. 1 ರಂದು ದೊಡ್ಡ ಹಬ್ಬ ವಿಜೃಂಭಣೆಯಿಂದ ನಡೆಯಿತು. ಏ. 27 ರಿಂದ ಹಬ್ಬದ ಕಟ್ಟು ಬೀಳುವ ಮೂಲಕ ಆರಂಭಗೊಂಡು, ಏ. 30 ರಂದು ಪಟ್ಟಣಿ, ಎತ್ತೇರಾಟ, ದೇವರ ಪ್ರಸಾದ, ಅನ್ನಸಂತರ್ಪಣೆ, ಮಧ್ಯಾಹ್ನ ದೇವರ ಬಲಿ ನಡೆಯಿತು.
ತಾ. 1 ರಂದು ಬೆಳಿಗ್ಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಅಂಬುಕಾಯಿ ಬಿಡುವದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಸಂಜೆ 4 ಗಂಟೆಗೆ ದೇವರು ಜಳಕಕ್ಕೆ ಹೋಗಿ ರಾತ್ರಿ 7 ಗಂಟೆಗೆ ದೇವರ ಉತ್ಸವ ನಡೆಯಿತು. ವಿಶೇಷವೆಂದರೆ ಮರಗೋಡು ಶ್ರೀ ಶಿವ-ಪಾರ್ವತಿ ದೇವಾಲಯದ ಈ ಹಬ್ಬವು ಮಳೆಯ ಸಿಂಚನದ ನಡುವೆಯೇ ನಡೆಯಿತು. ತಾ. 2 ರ ರಾತ್ರಿಯಿಂದ ತಾ. 3 ರ ತನಕ ದೈವಗಳ ಕೋಲ, ವಿಷ್ಣುಮೂರ್ತಿ ಕೋಲ ಮತ್ತು ಮಧ್ಯಾಹ್ನ 12 ಗಂಟೆಗೆ ಮೇಲೇರಿ ನಡೆಯಿತು. ಹಬ್ಬದಲ್ಲಿ ಗ್ರಾಮಸ್ಥರು, ಹೊರ ಗ್ರಾಮದವರು, ತಂತ್ರಿಗಳು, ಅರ್ಚಕರು, ತಕ್ಕಮುಖ್ಯಸ್ಥರು ಹಾಗೂ ದಾನಿಗಳು, ಭಕ್ತರು ಪಾಲ್ಗೊಂಡಿದ್ದರು.