ಬೆಂಗಳೂರು, ಮೇ 4: ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಎಂಬ ಹೆಸರಿನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 1 ಲಕ್ಷದವರೆಗಿನ ರೈತರ ಸಾಲ ಮನ್ನಾ, ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ ನೀಡುವ ತೀರ್ಮಾನ, ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳ ನಿಷೇಧ, ಗೋಹತ್ಯೆ ತಡೆ ಮಸೂದೆ ಜಾರಿ, ಭ್ರಷ್ಟಾಚಾರದ ಪ್ರಕರಣ ಬಯಲಿಗೆ ಎಳೆಯುವವರ ರಕ್ಷಣೆಗಾಗಿ ವಿಷಲ್ ಬ್ಲೋವರ್ ಪಾಲಿಸಿ ರಚನೆ, ಪ್ರತಿ ಜಿಲ್ಲೆಯಲ್ಲಿ 3 ಹಾಗೂ ತಾಲೂಕಿಗೆ 1 ಅನ್ನಪೂರ್ಣ ಕ್ಯಾಂಟೀನ್, 20 ಲಕ್ಷ ಸಣ್ಣ ರೈತರಿಗೆ ತಲಾ ರೂ. 10,000 ನೀಡುವ ನೇಗಿಲಯೋಗಿ ಯೋಜನೆ, ರೈತರ ಪಂಪ್‍ಸೆಟ್‍ಗಳಿಗೆ ಪ್ರತಿದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ, ಪ್ರತಿವರ್ಷ ಒಂದು ಸಾವಿರ ರೈತರಿಗೆ ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾಟ್ರ್ಫೋನ್, ಸ್ಯಾನಿಟರಿ ನ್ಯಾಪ್ಕಿನ್, ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ರೂ. 25 ಸಾವಿರ ಮತ್ತು 3 ಗ್ರಾಂನ ಚಿನ್ನದ ತಾಳಿ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ. 1 ರ ಬಡ್ಡಿ ದರದಲ್ಲಿ ರೂ. 2 ಲಕ್ಷದವರೆಗೆ ಸಾಲ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು.
ಕುಟುಂಬ ಸದಸ್ಯರ ಎದುರೇ ಬಾಲಕಿಗೆ ಬೆಂಕಿ ರಾಂಚಿ, ಮೇ 4: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಕುಟುಂಬ ಸದಸ್ಯರ ಎದುರೇ ಬಾಲಕಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ದಾರುಣ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಛಾತ್ರಾ ಜಿಲ್ಲೆಯ ರಾಜಾತೆಂಡುಹ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಕುಟುಂಬ ಸದಸ್ಯರು ಮದುವೆಗೆಂದು ಬೇರೆ ಊರಿಗೆ ಹೋಗಿದ್ದರು. ಈ ಸಂದರ್ಭ ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇಂದು ಬಾಲಕಿಯ ತಂದೆ ವಿಷಯವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದರು. ಪಂಚಾಯಿತಿ ಸೇರಿದ ಗ್ರಾಮಸ್ಥರು ಅತ್ಯಾಚಾರ ಎಸಗಿದ ನಾಲ್ವರು ದುಷ್ಕರ್ಮಿಗಳಿಗೆ 100 ಸಲ ಬಸ್ಕಿ ತೆಗೆಯುವ ಮತ್ತು ಬಾಲಕಿಯ ಪೆÇೀಷಕರಿಗೆ 50 ಸಾವಿರ ರೂಪಾಯಿ ದಂಡ ಕಟ್ಟಿ ರಾಜಿ ಮಾಡಿಕೊಳ್ಳಬೇಕು ಎಂದು ಶಿಕ್ಷೆ ವಿಧಿಸಿತ್ತು. ಪಂಚಾಯಿತಿ ಆದೇಶದಿಂದ ಕೆರಳಿದ ಯುವಕರು ಬಾಲಕಿಯ ಮನೆಗೆ ನುಗ್ಗಿ ಎಲ್ಲರನ್ನೂ ಥಳಿಸಿದರು. ಬಳಿಕ ಬಾಲಕಿಯನ್ನು ಹೊರಗೆಳೆದು ಜೀವಂತ ಸುಟ್ಟು ಹಾಕಿದರು ಎಂದು ಬಾಲಕಿಯ ಪೆÇೀಷಕರು ಪೆÇಲೀಸರಿಗೆ ದೂರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ತಾ. 12 ರಂದು ಸಾರ್ವತ್ರಿಕ ರಜೆ ಘೋಷಣೆ
ಬೆಂಗಳೂರು, ಮೇ 4: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ನಡೆಯುವ ತಾ. 12 ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ. ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಕಚೇರಿಗಳಿಗೆ ಸರ್ಕಾರ ರಜೆ ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರು ಅಂದು ವೇತನ ಸಹಿತ ರಜೆಗೆ ಅರ್ಹರಿರುತ್ತಾರೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ. ನೆಗೊಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಪ್ರಕಾರ ಸರ್ಕಾರದ ಅಧೀನ ಕಾರ್ಯದರ್ಶಿ ಡಾ. ನಂಜುಂಡೇ ಗೌಡ ಅಧಿಸೂಚನೆ ಹೊರಡಿಸಿದ್ದಾರೆ.
ದಲಿತರೊಂದಿಗೆ ಆಹಾರ ಸೇವನೆ ನಾಟಕ ಬಿಡಿ
ನವದೆಹಲಿ, ಮೇ 4: ದಲಿತರೊಂದಿಗೆ ಆಹಾರ ಸೇವಿಸುವ ನಾಟಕವನ್ನು ನಿಲ್ಲಿಸುವಂತೆ ಬಿಜೆಪಿ ನಾಯಕರಿಗೆ ಆರ್‍ಎಸ್‍ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್‍ನ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಮೋಹನ್ ಭಾಗ್ವತ್, ಕಠಿಣ ಶಬ್ದಗಳಲ್ಲಿ ಬಿಜೆಪಿ ನಾಯಕರನ್ನು ಟೀಕಿಸಿದ್ದು, ದಲಿತರೊಂದಿಗೆ ಆಹಾರ ಸ್ವೀಕರಿಸುವ ನಾಟಕ ನಿಲ್ಲಿಸಿ, ಆ ಸಮುದಾಯದೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಿ, ಜಾತಿಯ ಸಂಕೋಲೆಗಳಿಂದ ಕಳಚಿಕೊಳ್ಳುವದಕ್ಕೆ ಕೇವಲ ಸಾಂದರ್ಭಿಕ, ಸಾಂಕೇತಿಕ ನಡೆಗಳಿಂದ ಜಾತಿಯ ಸಂಕೋಲೆಗಳನ್ನು ಕಳಚುವದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕರು ಸಾಮಾಜಿಕ ಸೌಹಾರ್ದತೆಯ ಬಗ್ಗೆಯೂ ಮಾತನಾಡಿದ್ದಾರೆ. ಇದೇ ವೇಳೆ ದಲಿತ ಕುಟುಂಬಗಳನ್ನು ಭೇಟಿ ಮಾಡಿ, ಅವರೊಂದಿಗಿನ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವಂತೆ ಬಿಜೆಪಿಯ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸೂಚನೆ ಬಗ್ಗೆಯೂ ಮೋಹನ್ ಭಾಗ್ವತ್ ಮಾತನಾಡಿದ್ದು, ಕೇವಲ ಪ್ರಚಾರಕ್ಕಾಗಿ ದಲಿತ ದಲಿತರೊಂದಿಗೆ ಆಹಾರ ಸೇವಿಸುವದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ.
ಕರಡಿಯೊಂದಿಗೆ ಸೆಲ್ಫಿ ತೆಗೆದ ಯುವಕ ಬಲಿ
ಒಡಿಶಾ, ಮೇ 4: ಪ್ರಾಣಿಗಳೊಡನೆ ಸೆಲ್ಫಿ ತೆಗೆಸಿಕೊಳ್ಳ ಹೋಗಿ ಅವಾಂತರ ಮಾಡಿಕೊಂಡ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ. ಇದೀಗ ಒಡಿಶಾದಲ್ಲಿ ಸಹ ಅಂತಹುದೇ ಘಟನೆ ನಡೆದಿದ್ದು ಯುವಕನೊಬ್ಬ ಕರಡಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಮೃತಪಟ್ಟಿದ್ದಾನೆ. ಕಾಟಪಾಡ್‍ನಿಂದ ಪಾಪದಹಂಡಿಗೆ ಬೊಲೆರೋ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಭು ಭಾತ್ರಾ ಕರಡಿ ಧಾಳಿಗೆ ಒಳಗಾಗಿ ಸಾವನ್ನಪ್ಪಿದ ದುರ್ದೈವಿ. ಟ್ಯಾಕ್ಸಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಭು ಭಾತ್ರಾ ವಿವಾಹ ಕಾರ್ಯಕ್ರಮ ಮುಗಿಸಿ ಸ್ನೇಹಿತರು, ಕುಟುಂಬದವರೊಡನೆ ವಾಪಸಾಗುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಕರಡಿಯೊಂದನ್ನು ಕಂಡಿದ್ದಾನೆ. ತಕ್ಷಣ ಅದರ ಜತೆ ಸೆಲ್ಫಿ ತೆಗೆದುಕೊಳ್ಳಲು ಧಾವಿಸಿದ್ದಾನೆ. ಆಗ ಕರಡಿ ಅವನ ಮೇಲೆ ಧಾಳಿ ನಡೆಸಿದೆ. ಸಹ ಪ್ರಯಾಣಿಕರು ಆತನನ್ನು ಕರಡಿಯಿಂದ ಬಿಡಿಸಲು ಮುಂದಾದರೂ ಕರಡಿ ಮಾತ್ರ ಅವನನ್ನು ಬಿಡದೆ ಕಚ್ಚಿ ಗಾಯಗೊಳಿಸಿದೆ. ಸಹ ಪ್ರಯಾಣಿಕರೊಬ್ಬರು ಈ ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಪ್ರಕರಣದ ಕುರಿತಂತೆ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
10 ದಿನದಲ್ಲಿ ರೈತರ ಸಾಲ ಮನ್ನಾ
ಕಲಬುರ್ಗಿ, ಮೇ 4: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದಲ್ಲೇ ದೇಶಾದ್ಯಂತ ಎಲ್ಲಾ ರೈತರ ಸಾಲ ಮನ್ನಾ ಮಾಡುವದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. ಇಂದು ಕಲಬುರ್ಗಿ ಜಿಲ್ಲೆಯ ಕಾಳಗಿಯಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 2019 ರಲ್ಲಿ ನಾವು ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲ ಮನ್ನಾ ಮಾಡುತ್ತೇವೆ ಮತ್ತು ಕರ್ನಾಟಕ ರೈತರ ಅಭಿವೃದ್ಧಿಗಾಗಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವದು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಹಾಯಕ್ಕೆ ಬರುವದಿಲ್ಲ ಎಂದು ಆರೋಪಿಸಿದ ರಾಹುಲ್ ಗಾಂಧಿ, ಮೋದಿ ಶ್ರೀಮಂತರ ರೂ. 2.5 ಲಕ್ಷ ಕೋಟಿ ಸಾಲ ಮರೆತು ಬಿಡುತ್ತಾರೆ. ಆದರೆ ರೈತರ ಒಂದು ರೂಪಾಯಿ ಸಾಲ ಸಹ ಅವರು ಮನ್ನಾ ಮಾಡುವದಿಲ್ಲ ಎಂದು ವಾಗ್ದಾಳಿ ನಡೆಸಿದರು. ನಾವು ಕರ್ನಾಟಕ ರೈತರ ರೂ. 8 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಆದರೆ ಮೋದಿ ರಾಜ್ಯದ ರೈತರಿಗಾಗಿ ಏನನ್ನೂ ಮಾಡಿಲ್ಲ ಎಂದು ದೂರಿದರು.