ಕೂಡಿಗೆ, ಮೇ 4: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾ ವಸತಿ ನಿಲಯಕ್ಕೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ರಾಜ್ಯ ಮಟ್ಟದಲ್ಲಿ ಪ್ರವೇಶ ಆಯ್ಕೆ ಪರಿಶೀಲನಾ ತರಬೇತಿ ಶಿಬಿರವು ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯ ಆವರಣದಲ್ಲಿ ನಡೆಯಿತು.

ರಾಜ್ಯದಲ್ಲಿರುವ ಕ್ರೀಡಾ ಕಾಲೇಜುಗಳಿಗೆ ಪ್ರಥಮ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರವೇಶ ಆಯ್ಕೆ ಪರಿಶೀಲನಾ ತರಬೇತಿ ಶಿಬಿರವು ತಾಲ್ಲೂಕು, ಜಿಲ್ಲೆ, ಹಾಗೂ ವಿಭಾಗ ಮಟ್ಟದಲ್ಲಿ ನಡೆದು ಇದೀಗ ಕೊನೆಯ ಹಂತವಾಗಿ ಕೂಡಿಗೆಯಲ್ಲಿ ನಡೆಯಿತು.

ಪರಿಶೀಲನಾ ಶಿಬಿರದಲ್ಲಿ ಅಥ್ಲೇಟಿಕ್ಸ್, ಬಾಸ್ಕೇಟ್‍ಬಾಲ್, ಫುಟ್‍ಬಾಲ್, ಜಿಮ್ನಾಸ್ಟಿಕ್, ಹಾಕಿ, ವಾಲಿಬಾಲ್ ಕ್ರೀಡೆಗಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದ 136 ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ನಡೆಯುತ್ತಿದೆ. 72 ಹುಡುಗರು ಮತ್ತು 64 ಹುಡುಗಿಯರಿಗೆ ವಿವಿಧ ಕ್ರೀಡೆಗಳಿಗೆ ರಾಜ್ಯ ಮಟ್ಟದ ನುರಿತ 16 ಕ್ರೀಡಾ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.

ಈ ಶಿಬಿರದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು ಕ್ರೀಡಾ ಅರ್ಹತೆಯ ಅನುಗುಣವಾಗಿ ರಾಜ್ಯದ ವಿವಿಧ ಕ್ರೀಡಾ ವಸತಿ ನಿಲಯಗಳಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ರಾಜ್ಯ ಮಟ್ಟದಲ್ಲಿ ಪ್ರವೇಶ ಆಯ್ಕೆ ಪರಿಶೀಲನಾ ತರಬೇತಿ ಶಿಬಿರದ ಶಿಬಿರಾಧಿಕಾರಿ ವಸಂತ್ ತಿಳಿಸಿದ್ದಾರೆ.