ಮಡಿಕೇರಿ, ಮೇ 4: ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಯೊಂದಿಗೆ ಕರ್ನಾಟಕ ರಾಜ್ಯದ ಅಭ್ಯುದಯಕ್ಕಾಗಿ ಈ ಬಾರಿ ಬಿಜೆಪಿಗೆ ಮತದಾನ ಮಾಡುವಂತೆ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು. ನಗರದಲ್ಲಿ ಶುಕ್ರವಾರದ ಸಂತೆದಿನ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಬಿರುಸಿನ ಮತಯಾಚನೆ ಮಾಡಿದ ಅವರು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.ಕೇಂದ್ರದಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರಮೋದಿ ಅವರ ಆಶಯಗಳನ್ನು ಕರ್ನಾಟಕ ಹಾಗೂ ಕೊಡಗಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ತಾನು ಹಾಗೂ ಬೋಪಯ್ಯ ಇಬ್ಬರನ್ನೂ ಮತ್ತೊಮ್ಮೆ ಜನತೆ ಆಶೀರ್ವದಿಸಬೇಕೆಂದು ಭಿನ್ನವಿಸಿದರು.ವ್ಯಾಪಕ ಬೆಂಬಲ: ರಾಜ್ಯ ಕಾಂಗ್ರೆಸ್ ಸರಕಾರದ ಕಾರ್ಯ ವೈಖರಿಯಿಂದ ಭ್ರಮನಿರಸನ ಗೊಂಡಿರುವ (ಮೊದಲ ಪುಟದಿಂದ) ಜಿಲ್ಲೆಯ ಜನತೆ, ತನ್ನ ಪ್ರವಾಸ ಸಂದರ್ಭ ತೀವ್ರ ಅಸಮಾಧಾನದೊಂದಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಬಗ್ಗೆ ವ್ಯಾಪಕ ಬೆಂಬಲ ಕಂಡುಬರುತ್ತಿದೆ ಎಂದು ಮತಯಾಚನೆ ಸಂದರ್ಭದ ಅನುಭವ ಹಂಚಿಕೊಂಡರು.

ವಿಶೇಷವಾಗಿ ಬಡವರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ರೈತರಿಗೆ ಗೊಬ್ಬರ, ಕೃಷಿ ಉಪಕರಣ ಸಬ್ಸಿಡಿ, ಜನೌಷಧ ಯೋಜನೆ, ಉಜ್ವಲ ಅನಿಲಭಾಗ್ಯದಿಂದ ಮಹಿಳೆಯರಿಗೆ ಹೊಗೆ ಮುಕ್ತ ಅಡುಗೆ ವ್ಯವಸ್ಥೆ, ಹೆಣ್ಣುಮಕ್ಕಳ ಸಹಿತ ಬಡವರಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹ, ಬಡ್ಡಿರಹಿತ ಸಾಲದಿಂದ ಮಹಿಳಾ ಸಬಲೀಕರಣ ದಂತಹ ಕಾರ್ಯಕ್ರಮಗಳಿಂದ ಅಪಾರ ಜನ ಬೆಂಬಲ ಲಭಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಗರದ ಬನ್ನಿಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದ ತನಕ ಕಾಲ್ನಡಿಗೆಯಲ್ಲೇ ಸಂಚರಿಸಿ ಪ್ರತಿ ಅಂಗಡಿ ಹಾಗೂ ಬೀದಿ ವ್ಯಾಪಾರಿಗಳನ್ನು, ವಾಹನಗಳ ಪ್ರಯಾಣಿಕರ ಸಹಿತ ಆಟೋ ಚಾಲಕರು, ಪಾದಚಾರಿಗಳನ್ನು ಸ್ವತಃ ರಂಜನ್ ಮತಯಾಚಿಸಿದ ಸನ್ನಿವೇಶ ಕಂಡುಬಂತು.

ವಿಧಾನಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಪಕ್ಷದ ಪ್ರಮುಖರಾದ ಬೆಲ್ಲುಸೋಮಯ್ಯ ಶಜಿಲ್ ಕೃಷ್ಣನ್, ರವಿ ಬಸಪ್ಪ, ಮೋಂತಿ ಗಣೇಶ್, ಭಾರತೀ ರಮೇಶ್, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ನಗರಸಭಾ ಸದಸ್ಯರುಗಳಾದ ಪ್ರಕಾಶ್, ರಮೇಶ್, ಅನಿತ, ಸವಿತ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ, ತಳೂರು ಕಿಶೋರ್ ಕುಮಾರ್, ಪಿ.ಕೆ. ಶೇಷಪ್ಪ ಸೇರಿದಂತೆ ಅನೇಕ ಪ್ರಮುಖರು, ಕಾರ್ಯಕರ್ತರು, ಗ್ರಾಮೀಣ ಪ್ರದೇಶಗಳ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಬೆಂಬಲಿಗರು ಮತ ಯಾಚನೆಯಲ್ಲಿ ಪಾಲ್ಗೊಂಡಿದ್ದರು.