ಮಡಿಕೇರಿ, ಮೇ 4: ಕರ್ನಾಟಕ ಹಾಗೂ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಬದಲಾವಣೆಗಾಗಿ ಜಾತ್ಯತೀತ ಜನತಾದಳವನ್ನು ಬೆಂಬಲಿಸುವ ಮೂಲಕ, ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸುವಂತೆ, ಜೆಡಿಎಸ್ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಬಿ.ಎ. ಜೀವಿಜಯ ಕರೆ ನೀಡಿದರು.ಸಂತೆ ದಿನವಾದ ಇಂದು ತೆರೆದ ವಾಹನದಲ್ಲಿ ಪಕ್ಷದ ಪ್ರಮುಖರ ಸಹಿತ ಕಾರ್ಯಕರ್ತರೊಂದಿಗೆ ನಗರದ ಸುದರ್ಶನ ವೃತ್ತದಿಂದ ಮಾರುಕಟ್ಟೆ ಆವರಣ ತನಕ ಮೆರವಣಿಗೆ ನಡೆಸಿದ ಅವರು, ಕರ್ನಾಟಕದಲ್ಲಿ ಮಾದರಿ ಆಡಳಿತ ನೀಡಲು, ಮುಖ್ಯ ಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲಿಸಬೇಕೆಂದು ಕಳಕಳಿ ವ್ಯಕ್ತಪಡಿಸಿದರು.ಕಳೆದ ಅನೇಕ ಚುನಾವಣೆಗಳನ್ನು ಎದುರಿಸುತ್ತಾ ಬಂದಿರುವ ತಮಗೆ, ಈ ಬಾರಿ ಜೆಡಿಎಸ್ ವರಿಷ್ಠರು ಕೊಡಗಿನಲ್ಲಿ ಬದಲಾವಣೆಗಾಗಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿರುವದಾಗಿ, ಮಾರುಕಟ್ಟೆ ಆವರಣದಲ್ಲಿ ಮಾತನಾಡುತ್ತಾ ನುಡಿದರು.

(ಮೊದಲ ಪುಟದಿಂದ) ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರ ಮತ್ತು ಈಗಿನ ಕಾಂಗ್ರೆಸ್ ಸರಕಾರದ ಆಡಳಿತ ಕಂಡಿರುವ ಜನತೆ, ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಒಂದು ಅವಕಾಶ ನೀಡುವ ಮುಖಾಂತರ, ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಆಶೀರ್ವದಿಸುವಂತೆ ಕರೆ ನೀಡಿದರು.ಕರ್ನಾಟಕ ಹಾಗೂ ಕೊಡಗಿನಲ್ಲಿ ಎಲ್ಲಾ ವರ್ಗದ ಜನತೆ ಶಾಂತಿ, ನೆಮ್ಮದಿಯಿಂದ ಬಾಳುವಂತಾಗ ಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೀವಿಜಯ ಅಭಿಪ್ರಾಯಪಟ್ಟರು. ಆ ದಿಕ್ಕಿನಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಗೆಲ್ಲಿಸಿ ರಾಜ್ಯದಲ್ಲಿ ಕುಮಾರಸ್ವಾಮಿ ನಾಯಕತ್ವದ ಆಡಳಿತಕ್ಕೆ ಬೆಂಬಲ ಅಗತ್ಯವೆಂದು ನೆನಪಿಸಿದರು.

ಜೆಡಿಎಸ್ ಪ್ರಮುಖ ಹಾಗೂ ನಗರಸಭಾ ಸದಸ್ಯ ಕೆ.ಎಂ. ಗಣೇಶ್, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಪ್ರೇಂಕುಮಾರ್ ಅವರುಗಳು ಮಾತನಾಡಿ, ಜೀವಿಜಯ ಅವರನ್ನು ಗೆಲ್ಲಿಸಿದರೆ ಕೊಡಗಿನ ಅಭಿವೃದ್ಧಿಯೊಂದಿಗೆ ಬದಲಾವಣೆ ಕಾಣಲು ಸಾಧ್ಯವೆಂದು ಪ್ರತಿಪಾದಿಸಿದರು. ಜಿ.ಪಂ. ಮಾಜೀ ಅಧ್ಯಕ್ಷ ರಾಜಾರಾವ್, ಜೆಡಿಎಸ್ ಪ್ರಮುಖರಾದ ಐಸಾಕ್ ಖಾನ್, ರಾಜ, ಮನ್ಸೂರ್ ಆಲಿ, ಶಿವದಾಸ್, ರಾಜೇಶ್ ಯಲ್ಲಪ್ಪ, ಸುನಿಲ್, ಸಂಗೀತಾ ಪ್ರಸನ್ನ, ಲೀಲಾ ಶೇಷಮ್ಮ, ಲೋಕೇಶ್ ಕುಮಾರ್ ಸೇರಿದಂತೆ ನೂರಾರು ಯುವಕರು ಘೋಷಣೆಗಳೊಂದಿಗೆ ಜೆಡಿಎಸ್ ಬಲಪ್ರದರ್ಶನ ನಡೆಸಿದರು.