ಮಡಿಕೇರಿ, ಮೇ 4: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದ ಅಂತಿಮ ಹಂತಕ್ಕೆ ಹಾಲಿ ಚಾಂಪಿಯನ್ ತಳೂರು ತಂಡ ಹಾಗೂ ಇದೇ ಪ್ರಥಮ ಬಾರಿಗೆ ಹೊಸ ತಂಡವಾಗಿ ಕುದುಪಜೆ ತಂಡಗಳು ಪ್ರವೇಶಿಸಿವೆ.ಇಂದು ನಡೆದ ಮೊದಲನೇ ಸೆಮಿಫೈನಲ್‍ನಲ್ಲಿ ಕುದುಪಜೆ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಉಳುವಾರನ ತಂಡ 9.2 ಓವರ್‍ಗೆ ಎಲ್ಲಾ ವಿಕೆಟ್ ಕಳೆದುಕೊಂಡು 61 ರನ್ ಗಳಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕುದುಪಜೆ ತಂಡ 8 ಓವರ್‍ನಲ್ಲಿ ಎರಡು ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಉಳುವಾರನ ಪ್ರಸಾದ್ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ದಂಬೆಕೋಡಿ ಹಾಗೂ ಚಾಂಪಿಯನ್ ತಳೂರು ತಂಡಗಳ ನಡುವೆ ನಡೆದ ಎರಡನೇ ಸೆಮಿಫೈನಲ್ಸ್‍ನಲ್ಲಿ ತಳೂರು ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡ 10 ಓವರ್‍ಗಳಲ್ಲಿ 6 ವಿಕೆಟ್‍ಗೆ 75 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ತಳೂರು ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ (ಮೊದಲ ಪುಟದಿಂದ) ತೋರಿತ್ತಾದರೂ ತಂಡದ ಭರವಸೆಯ ಆಟಗಾರ ವಿಕ್ಕಿ 41 ರನ್ ಗಳಿಸಿ ಔಟಾದ ಸಂದರ್ಭ ದಂಬೆಕೋಡಿ ತಂಡದಲ್ಲಿ ಸಂಭ್ರಮ ಕಂಡು ಬಂದಿತು. ನಂತರದಲ್ಲಿ ಇನ್ನೂ 3 ವಿಕೆಟ್‍ಗಳು ಪತನವಾದಾಗ ತಳೂರು ಸಂಕಷ್ಟದಲ್ಲಿತ್ತು. ಕೊನೆಯ 6 ಎಸೆತದಲ್ಲಿ 8 ರನ್‍ಗಳ ಅವಶ್ಯಕತೆ ಇದ್ದ ಸಂದರ್ಭ ದಂಬೆಕೋಡಿ ತಂಡದ ನಾಯಕ ದಿಗಂತ್ ರನ್‍ಗಳಿಗೆ ಕಡಿವಾಣ ಹಾಕಿದರಾದರೂ ತಳೂರು ತಂಡದ ನೆರವಿಗೆ ಬಂದಿದ್ದ ಪವನ್ ಒಂದು ಸಿಕ್ಸರ್ ಸಿಡಿಸಿದರು. ಮತ್ತೊಂದು ಎಸೆತದಲ್ಲಿ ಪವನ್ ಹೊಡೆದ ಚೆಂಡು ಫೀಲ್ಡರ್‍ನ ಕೈಗೆ ಬಂದಿತ್ತಾದರೂ ಕ್ಯಾಚನ್ನು ಕೈ ಚೆಲ್ಲಿ ದಂಬೆಕೋಡಿ ತಂಡ ಪಂದ್ಯವನ್ನು ಕಳೆದುಕೊಂಡಿತು. ತಳೂರು ಮತ್ತೊಮ್ಮೆ ಫೈನಲ್‍ಗೇರಿತು. ದಂಬೆಕೋಡಿ ಟಿಂಪು ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಅಯ್ಯಂಡ್ರ ತಂಡ 4 ವಿಕೆಟ್‍ಗೆ 54 ರನ್ ಗಳಿಸಿದರೆ, ತಳೂರು ತಂಡ 2 ವಿಕೆಟ್‍ಗೆ 58 ರನ್ ಗಳಿಸಿ ಸೆಮಿಫೈನಲ್‍ಗೇರಿತು. ಮತ್ತೊಂದು ಪಂದ್ಯದಲ್ಲಿ ದಂಬೆಕೋಡಿ ತಂಡ 1 ವಿಕೆಟ್‍ಗೆ 100 ರನ್ ಗಳಿಸಿದರೆ, ತೆಕ್ಕಡೆ ತಂಡ 4 ವಿಕೆಟ್ ಕಳೆದುಕೊಂಡು 58 ರನ್ ಗಳಿಸಿ 42 ರನ್‍ಗಳ ಅಂತರದಿಂದ ಸೋಲನುಭವಿಸಿತು. ದಂಬೆಕೋಡಿ ದಿಗಂತ್ 54, ಕೀರ್ತಿ 40 ರನ್ ಗಳಿಸಿ ಗಮನ ಸೆಳೆದರು.

ಕ್ರಿಕೆಟ್ ಹಬ್ಬದ ಪ್ರಮುಖಾಂಶಗಳು

ಚೆರಿಯಮನೆ ಕ್ರಿಕೆಟ್ ಹಬ್ಬದ ಕೆಲವು ಪ್ರಮುಖಾಂಶಗಳು ಇಲ್ಲಿನ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‍ಮೆನ್ ಪಟ್ಟಿಯಲ್ಲಿ ಕುಡೆಕಲ್ಲು ಕಾರ್ತಿಕ್ ಅವರು ಮೊದಲಿಗರಾಗಿದ್ದಾರೆ. 4 ಮ್ಯಾಚ್‍ಗಳಲ್ಲಿ 26 ಸಿಕ್ಸರ್, 10 ಬೌಂಡರಿ, 3 ಅರ್ಧ ಶತಕ ಸೇರಿದಂತೆ ಒಟ್ಟು 242 ರನ್ ಗಳಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಕೊಂಬಾರನ ರಂಜು ಅವರು 22 ಸಿಕ್ಸರ್, 12 ಬೌಂಡರಿ, 1 ಅರ್ಧ ಶತಕ, 1 ಶತಕ ಸೇರಿದಂತೆ 210 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ತಳೂರು ವಿಕ್ಕಿ 22 ಸಿಕ್ಸರ್, 12 ಬೌಂಡರಿ, 1 ಅರ್ಧ ಶತಕ ಹಾಗೂ 1 ಶತಕ ಸೇರಿ 210 ರನ್‍ಗಳಿಸಿದ್ದಾರೆ. ವಿಕ್ಕಿ ಅವರಿಗೆ ಅಂತಿಮ ಪಂದ್ಯಾಟದಲ್ಲಿ ಇನ್ನಷ್ಟು ರನ್ ಗಳಿಸುವ ಅವಕಾಶವೂ ಇದೆ.

ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್‍ಗಳ ಪಟ್ಟಿಯಲ್ಲಿ ಬೈಮನ ನವೀನ್ 12 ವಿಕೆಟ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕುದುಪಜೆ ಮನೋಜ್ ಹಾಗೂ ರೋಶನ್ ತಲಾ 11 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದು, ಇವರಿಬ್ಬರೂ ಅಂತಿಮ ಪಂದ್ಯಾಟದಲ್ಲಿ ಇನ್ನಷ್ಟು ವಿಕೆಟ್ ಗಳಿಸುವ ಅವಕಾಶವಿದೆ.

1080 ಬೌಂಡರಿ

ಪಂದ್ಯಾವಳಿಯಲ್ಲಿ ಇದುವರೆಗೆ ಒಟ್ಟು 1080 ಬೌಂಡರಿಗಳು ದಾಖಲಾಗಿವೆ. ಅತೀ ಹೆಚ್ಚು ಬೌಂಡರಿ ಬಾರಿಸಿದವರ ಪೈಕಿ ಕೊಂಬಾರನ ರಂಜು 12, ಕುಡೆಕಲ್ಲು ಕಾರ್ತಿಕ್, ಬಿಳಿಯಂಡ್ರ ಆನಂದ್, ಉಳುವಾರನ ಮುರಳಿ ಅವರುಗಳು ತಲಾ 10 ಬೌಂಡರಿ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ.

1305 ಸಿಕ್ಸರ್‍ಗಳು

ಪಂದ್ಯಾವಳಿಯಲ್ಲಿ ಒಟ್ಟು 1305 ಸಿಕ್ಸರ್‍ಗಳು ದಾಖಲಾಗಿದ್ದು, ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪೈಕಿ ಕುಡೆಕಲ್ಲು ಕಾರ್ತಿಕ್ 26 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ತಳೂರು ಜೀತು 23 ಸಿಕ್ಸರ್ ಬಾರಿಸಿ ಎರಡನೇ ಹಾಗೂ ಕೊಂಬಾರನ ರಂಜು 22 ಸಿಕ್ಸರ್ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ತಳೂರು ಜೀತುಗೆ ಫೈನಲ್‍ನಲ್ಲಿ ಇನ್ನಷ್ಟು ಆಡುವ ಅವಕಾಶವಿದೆ.