ವೀರಾಜಪೇಟೆ, ಏ. 13: ಶತಾಯುಷಿ ಪರದಂಡ ಜಿ. ಚಂಗಪ್ಪ (ಚಾಮಿ) ಅವರಿಗೆ ನೂರನೇ ವರ್ಷದ ಹುಟ್ಟುಹಬ್ಬದ ಸಮಾರಂಭವನ್ನು, ನಾಲಡಿ ಗ್ರಾಮದ ಕಕ್ಕಬ್ಬೆಯ ಪರದಂಡ ಕುಟುಂಬದ ವತಿಯಿಂದ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ನೂರು ವರ್ಷ ತುಂಬಿದ ಪರದಂಡ ಜಿ. ಚಂಗಪ್ಪ ಅವರು ಮಿಲಿಟರಿಯ ಸೇವಾ ಅವಧಿಯಲ್ಲಿ ಇರಾಕ್ ಹಾಗೂ ಇತರ ದೇಶಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಸರಳ ಸಜ್ಜನ ವ್ಯಕ್ತಿಯಾಗಿ, ಸಾಹಿತಿಯಾಗಿ, ಕೊಡಗಿನ ಸಾಹಿತ್ಯ, ಕಥೆ-ಕವನಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆ ಹಾಗೂ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾಗಿ ಸೇವೆ ಸಲ್ಲಿಸಿದ್ದು ಇವರಿಗೆ 100 ವರ್ಷಗಳು ಕಳೆದರೂ ಆರೋಗ್ಯವಾಗಿ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಭಗವಂತನು ಇನ್ನು ಧೀರ್ಘಾಯುಷ್ಯ ಆರೋಗ್ಯವನ್ನು ನೀಡಲಿ ಎಂದು ಪರದಂಡ ಕುಟುಂಬದವರು, ಇಗ್ಗುತಪ್ಪ ದೇವಾಲಯದ ಭಕ್ತಜನ ಸಂಘ, ವೀರಾಜಪೇಟೆ ಕೊಡವ ಸಮಾಜ ಮುಂತಾದವರು ಶತಾಯುಷಿ ಪರದಂಡ ಚಂಗಪ್ಪ ಅವರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಚಂಗಪ್ಪ ಅವರು ಸೇವಾ ಅವಧಿಯಲ್ಲಿ ನಡೆದು ಬಂದ ಹಾದಿಯ ಸಂಕ್ಷಿಪ್ತ ಮಾಹಿತಿ ನೀಡಿ ಸ್ಮರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡವ ವಾರ ಪತ್ರಿಕೆಗಳ ಸಂಪಾದಕರುಗಳಾದ ಬ್ರಹ್ಮಗಿರಿಯ ಉಳ್ಳಿಯಡ ಪೂವಯ್ಯ, ಪೂಮಾಲೆಯ ಮಹೇಶ್ ನಾಚಯ್ಯ, ತೂಕ್ ಬೊಳಕ್ ಪತ್ರಿಕೆಯ ಶಂಕರಿ ಪೊನ್ನಪ್ಪ, ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಮಾತನಾಡಿದರು. ಕಾಂಡಂಡ ಜೋಯಪ್ಪ, ಪರದಂಡ ಚೋಂದವ್ವ, ಕಂಡ್ರತಂಡ ಕರ್ನಲ್ ಸುಬ್ಬಯ್ಯ, ಉಳ್ಳಿಂiÀiಡ ಸುಬ್ರಮಣಿ, ಪರದಂಡ ಜಯ ಬೋಪಣ್ಣ, ಕೌಶಲ್ಯ, ಸಿಮ್ಲಾ ಮುಂತಾದವರು ಹಾಜರಿದ್ದರು. ಪರದಂಡ ಸೋಮಯ್ಯ ಸ್ವಾಗತಿಸಿ, ವಂದಿಸಿದರು.