ಒಡೆಯನಪುರ, ಏ. 13: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೆ ಉತ್ತಮ ಸಂಸ್ಕಾರ ಹಾಗೂ ಮಾನವಿಯ ಮೌಲ್ಯಗಳನ್ನು ಕಲಿಸಿಕೊಡಿ ಎಂದು ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ. ಜಯಕುಮಾರ್ ಅಭಿಪ್ರಾಯ ಪಟ್ಟರು. ಸಮೀಪದ ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ ದೇವಾಲಯದ 20ನೇ ವಾರ್ಷಿಕ ಮಹೋತ್ಸವ ಮುಕ್ತಾಯ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮಾನವ ಸಾವಿನ ಕೊನೆಯಲ್ಲಿರುವಾಗ ಮಾತ್ರ ದೇವರ ಸ್ಮರಣೆ ಮಾಡುತ್ತಾನೆ; ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇವರು ಹಾಗೂ ಆದ್ಯಾತ್ಮಿಕ ಚಿಂತನೆಯನ್ನು ಸ್ಮರಿಸಬೇಕು, ದೇವರು ಹಾಗೂ ಆದ್ಯಾತ್ಮಿಕ ಚಿಂತನೆಯ ಬಗ್ಗೆ ನಂಬಿಕೆ ವಿಶ್ವಾಸವನ್ನು ಬೆಳೆಸಿ ಕೊಂಡರೆ ಜೀವನ ಹಸನಗೊಳ್ಳುತ್ತದೆ ಎಂದರು. ಸಮಾರಂಭದಲ್ಲಿ ಪ್ರಮುಖ ರಾದ ಜಿ.ಬಿ. ನಾಗಪ್ಪ, ಜಿ.ಬಿ. ಹರೀಶ್, ಗಣೇಶ್, ಗೋವಿಂದಪ್ಪ, ನಾರಾಯಣ, ಸೋಮಶೆಟ್ಟಿ, ಮಲ್ಲಿಕಾರ್ಜುನ, ಬಸವರಾಜು ಮುಂತಾದವರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
2 ದಿನಗಳ ವರೆಗೆ ನಡೆದ ಪೂಜಾ ಮಹೋತ್ಸವದಲ್ಲಿ ದೇವರಿಗೆ ವಿವಿಧ ಪೂಜಾ ವಿಧಿ ವಿಧಾನಗಳು ಸೇರಿದಂತೆ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಪೂಜಾ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮುಂಜಾನೆ 5.30 ಗಂಟೆಗೆ ಶ್ರೀ ಬನಶಂಕರಿ ಅಮ್ಮ ನವರನ್ನು ಅಡ್ಡಪಲ್ಲಕ್ಕಿಯಲ್ಲಿ ಗಂಗಾ ಸ್ನಾನಕ್ಕೆ ಕೊಂಡೊಯ್ಯಲಾಯಿತು.
ಈ ಸಂದರ್ಭದಲ್ಲಿ ವಾದ್ಯಗೋಷ್ಠಿ ಯಲ್ಲಿ ಪಂಚ ಕಲಶಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯವಾದ ಮೆರವಣಿಗೆಯ ಮೂಲಕ ದೇವಾಸ್ಥಾನಕ್ಕೆ ತರಲಾಯಿತು. ತದನಂತರ ಬೆಳಗ್ಗೆ 8.50 ಗಂಟೆಗೆ ಕೆಂಡ ಕೊಂಡ ಪ್ರವೇಶ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಕೆಂಡಕೊಂಡ ಪ್ರವೇಶ ಮಾಡಿದರು. ದೇವಾಲಯದ ಶ್ರೀ ಬನಶಂಕರಿ ಅಮ್ಮನವರಿಗೆ ಪೂಜೆ ನೆರವೇರಿಸಿದ ಬಳಿಕ ಕುಂಕುಮಾರ್ಚನೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಮಹೋತ್ಸವಕ್ಕೆ ತೆರೆಬಿತ್ತು. ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಮಹೋತ್ಸವದಲ್ಲಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.