ಮಡಿಕೇರಿ, ಏ. 12: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಪ್ರೇಯಸಿ ಹಾಗೂ ಆಕೆಯ ಕುಟುಂಬದ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೆನ್‍ಷನ್‍ಲೇನ್ ನಿವಾಸಿ, ಸುಜಾತ ಹೊಟೇಲ್‍ನ ಮಾಲೀಕರಾದ ರಾಮಚಂದ್ರ ಅವರ ಹಿರಿಯ ಪುತ್ರ ಸುದರ್ಶನ್ (27) ನೇಣಿಗೆ ಶರಣಾದ ದುರ್ದೈವಿಯಾಗಿದ್ದಾನೆ. ಸುದರ್ಶನ್ ಹಾಗೂ ಜಿ.ಟಿ. ರಸ್ತೆಯ ದಿ. ಸುರೇಶ್ ಎಂಬವರ ದ್ವಿತೀಯ ಪುತ್ರಿ ನಿಷಿತಾ ನಡುವೆ ಪ್ರೇಮಾಂಕುರವಿತ್ತು.

ಆದರೆ ಈ ನಡುವೆ ನಿಷಿತಾ ಹಾಗೂ ಸುದರ್ಶನ್ ನಡುವೆ ಕ್ಷುಲ್ಲಕ ಕಾರಣಗಳಿಗಾಗಿ ಕಲಹವಾಗುತ್ತಿತ್ತು ಎನ್ನಲಾಗಿದ್ದು, ನಿಷಿತಾ ಹಾಗೂ ಆಕೆಯ ಕುಟುಂಬದವರು ಸುದರ್ಶನ್‍ನಿಗೆ ಕಿರುಕುಳ ನೀಡುತ್ತಿದ್ದರೆಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದ್ದು, ತಾ. 8 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಸುದರ್ಶನ್ ತನ್ನ ಮನೆಯ ಕೊಠಡಿಯಲ್ಲಿ ಫ್ಯಾನ್‍ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಮರಣ ಪತ್ರ ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ತಿಳಿಸಿದ್ದಾನೆ. ಆದರೆ ಆತನ ಪೋಷಕರು ಪೊಲೀಸ್ ದೂರು ನೀಡಿದ್ದು, ನಿಷಿತಾ ಹಾಗೂ ಆಕೆಯ ಕುಟುಂಬದವರ ಮಾನಸಿಕ ಹಿಂಸೆಯೆ ಸುದರ್ಶನ್ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಸೆಕ್ಷನ್ 306ರ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.