ಗೋಣಿಕೊಪ್ಪ ವರದಿ, ಏ. 12: ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯನ್ನು ತಾ. 16 ರಂದು ತಿತಿಮತಿ ಸಮುದಾಯ ಭವನದಲ್ಲಿ ಆಚರಿಸಲಾಗುವದು ಎಂದು ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ್ಮ ದಿನಾಚರಣೆ ಅಂಗವಾಗಿ ‘ಎತ್ತ ಸಾಗುತ್ತಿದೆ ಭಾರತ’ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ. ತುಕಾರಾಮ್ ಅವರು ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳ ಕುರಿತು ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿನ ಬೆಳಿಗ್ಗೆ 9.30 ಗಂಟೆಗೆ ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಸ್ಥಾನದಿಂದ ಆರ್.ಎಂ.ಸಿ.ವರೆಗೆ ಮೆರವಣಿಗೆಯ ನಂತರ ಬೆಳಿಗ್ಗೆ 10.30 ಗಂಟೆಗೆ ತಿತಿಮತಿಯ ಚೈನ್‍ಗೇಟ್‍ನಿಂದ ತಿತಿಮತಿ ಸಮುದಾಯ ಭವನದವರೆಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಸಂಘಟನಾ ಸಂಚಾಲಕ ಸಿದ್ದಲಿಂಗಯ್ಯ ಅವರು ಉದ್ಘಾಟಿಸಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡ ಹೆಚ್.ಕೆ. ಸಣ್ಣಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ವಿ.ಆರ್. ರಜನಿಕಾಂತ್ ಹಾಗೂ ಸತೀಶ್ ಸಿಂಘಿ ಇದ್ದರು.