ಸೋಮವಾರಪೇಟೆ,ಏ.12: ತಾ. 17ರಂದು ಕುಶಾಲನಗರದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾ. 17ರಂದು ಅಪರಾಹ್ನ 3 ಗಂಟೆಗೆ ಕುಶಾಲನಗರದಲ್ಲಿ ಸಮಾವೇಶ ನಡೆಯಲಿದ್ದು, ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕುಮಾರಸ್ವಾಮಿ ಅವರೊಂದಿಗೆ ಜಿಲ್ಲೆಯ ಅಭ್ಯರ್ಥಿಗಳಾದ ಬಿ.ಎ. ಜೀವಿಜಯ, ಸಂಕೇತ್ ಪೂವಯ್ಯ ಸೇರಿದಂತೆ ರಾಜ್ಯಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಜೆಡಿಎಸ್‍ನ 20 ತಿಂಗಳ ಆಡಳಿತವನ್ನು ಜನರು ಮರೆತಿಲ್ಲ. ಅಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.
ಸಮಾವೇಶಕ್ಕೆ ಪಕ್ಷದ ಕಾರ್ಯಕರ್ತರು, ಕಾರ್ಮಿಕರು, ರೈತರು, ಅಲ್ಪಸಂಖ್ಯಾತರೂ ಸೇರಿದಂತೆ 15-20ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲೆಯಾದ್ಯಂತ ಮೊದಲ ಸುತ್ತಿನ ಪ್ರಚಾರ ಮುಗಿದಿದ್ದು, ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮತ್ತೆ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‍ನ ಜಿಲ್ಲಾ ಮಹಾ ಪ್ರಧಾನಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಪರಮೇಶ್, ಸೋಮವಾರಪೇಟೆ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಪ್ರವೀಣ್, ಆರ್‍ಎಂಸಿ ಸದಸ್ಯ ಸಿ.ಎಸ್.ನಾಗರಾಜು ಉಪಸ್ಥಿತರಿದ್ದರು.