ಸೋಮವಾರಪೇಟೆ,ಏ.12: ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ಜಾಮೀನುದಾರನನ್ನು ಗುರುತಿಸುವ ಸಂದರ್ಭ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದಡಿ ಮೊಕದ್ದಮೆ ದಾಖಲಾಗಿದ್ದ ಸೋಮವಾರಪೇಟೆಯ ವಕೀಲ ಎಸ್.ಎಸ್. ಮನೋಹರ್ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.
ಪ್ರಕರಣದ ಮೂರನೇ ಆರೋಪಿಯಾಗಿದ್ದ ವಕೀಲ ಎಸ್.ಎಸ್.ಮನೋಹರ್ ಅವರಿಗೆ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿರೀಕ್ಷಣಾ ಜಾಮೀನು ನೀಡಿದೆ. ವಕೀಲರ ಮೇಲೆ ಮೊಕದ್ದಮೆ ದಾಖಲಿಸಿರುವದನ್ನು ವಿರೋಧಿಸಿ ವಕೀಲರ ಸಂಘದ ಪದಾಧಿಕಾರಿಗಳು 5 ದಿನಗಳ ಕಾಲ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದರು.
ಇದರೊಂದಿಗೆ ವಕೀಲರ ಸಂಘದ ಪ್ರತಿನಿಧಿಗಳು ಆಡಳಿತಾತ್ಮಕ ನ್ಯಾಯಮೂರ್ತಿ ಹಾಗೂ ಹೈಕೋರ್ಟ್ ನ್ಯಾಯಾಧೀಶರನ್ನು ಧಾರಾವಾಡದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ, ಬುಧವಾರದಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಮಾತ್ರವಲ್ಲದೇ ಹೊರ ಜಿಲ್ಲೆಯಲ್ಲೂ ವಕೀಲರು ಕಲಾಪ ಬಹಿಷ್ಕರಿಸಿದ್ದರು.
ಘಟನೆ ಹಿನ್ನೆಲೆ: 2014ರಲ್ಲಿ ಶನಿವಾರಸಂತೆಯಲ್ಲಿ ನಡೆದ ಘರ್ಷಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರದೀಪ್ ಎಂಬವರಿಗೆ ವಾರೆಂಟ್ ಆದ ಸಂದರ್ಭ, ಜಾಮೀನುದಾರರಾದ ವೇದಮೂರ್ತಿ ಎಂಬವರು, ದೊಡ್ಡಕೊಳತ್ತೂರು ಗ್ರಾಮದ ಜಯಲಿಂಗಪ್ಪ ಎಂಬವರ ಆರ್‍ಟಿಸಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಧೀಶರ ಮುಂದೆ ನಾನೇ ಜಯಲಿಂಗಪ್ಪ ಎಂದು ಹೇಳಿ ಜಾಮೀನು ಕೊಡಿಸಿದ್ದರು.
ಇತ್ತೀಚೆಗೆ ಈ ಪ್ರಕರಣ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಶಿರಸ್ತೇದಾರ್ ಲಕ್ಷ್ಮೀ ಅವರು, ಸೋಮವಾರಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂದರ್ಭ ಆರೋಪಿಯ ಪರ ವಕೀಲ ಮನೋಹರ್ ಅವರನ್ನು 3ನೇ ಆರೋಪಿಯನ್ನಾಗಿ ಮಾಡಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.