ಸೋಮವಾರಪೇಟೆ,ಏ.12: ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಂಇಪಿ)ಯಿಂದ ಮಡಿಕೇರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮೂವರು ಉತ್ಸುಕರಾಗಿದ್ದು, ಇದರಲ್ಲಿ ಸೋಮವಾರಪೇಟೆಯ ಹೊಸತೋಟ ಗ್ರಾಮ ನಿವಾಸಿ ಓ.ಎಂ. ಕೋಯ ಅವರು ಸ್ಪರ್ಧಿಸಲು ಸಿದ್ದತೆ ಆರಂಭಿಸಿದ್ದಾರೆ.

ಡಾ. ಸಾಹೀರಾ ಶೇಕ್ ಅವರ ನಾಯಕತ್ವದಲ್ಲಿ ಇದೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದ ವಿಧಾನ ಸಭಾ ಚುನಾವಣಾ ಅಖಾಡಕ್ಕೆ ಎಂಇಪಿ ಪಕ್ಷ ಇಳಿಯುತ್ತಿದ್ದು, ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ.

ಕೊಡಗಿನ ಮಡಿಕೇರಿ ಕ್ಷೇತ್ರದಿಂದ ಈಗಾಗಲೇ ಮೂವರು ಮುಖಂಡರು ಈ ಪಕ್ಷದಿಂದ ಉಮೇದುವಾರಿಕೆ ಬಯಸಿ ಅರ್ಜಿ ಸಲ್ಲಿಸಿದ್ದು, ಕುಶಾಲನಗರ, ಮಡಿಕೇರಿ ಸೇರಿದಂತೆ ಸೋಮವಾರಪೇಟೆಯಿಂದಲೂ ತಲಾ ಒಂದು ಅರ್ಜಿ ಸಲ್ಲಿಕೆಯಾಗಿದೆ.

ತಾಲೂಕಿನ ಹೊಸತೋಟ ಗ್ರಾಮ ನಿವಾಸಿಯಾಗಿರುವ, ಐಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಅಂಗವಿಕಲರ ಘಟಕದ ಮಾಜಿ ಜಿಲ್ಲಾಧ್ಯಕ್ಷ ಓ.ಎಂ. ಕೋಯ ಅವರು ಈ ಬಾರಿ ಎಂಇಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸಾಹೀರಾ ಶೇಕ್ ಅವರನ್ನು ಬೆಂಗಳೂರಿನ ಲೀಲಾ ಪ್ಯಾಲೇಸ್ ಸಭಾಂಗಣದಲ್ಲಿ ಭೇಟಿ ಮಾಡಿರುವ ಕೋಯ ಮತ್ತು ಅವರ ಬೆಂಬಲಿಗರು ಟಿಕೆಟ್‍ಗಾಗಿ ಬೇಡಿಕೆ ಸಲ್ಲಿಸಿದ್ದಾರೆ.

ಮಡಿಕೇರಿ ಕ್ಷೇತ್ರದಿಂದ ಈಗಾಗಲೇ ಈರ್ವರು ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲಿಯೇ ಸ್ಥಳೀಯವಾಗಿ ಸಮೀಕ್ಷೆ ನಡೆಸಿ ಯಾವ ಅಭ್ಯರ್ಥಿಯ ಪರ ಒಲವು ಹೆಚ್ಚಿದೆ ಎಂಬದನ್ನು ಖಾತ್ರಿಪಡಿಸಿಕೊಂಡು ಟಿಕೆಟ್ ನೀಡಲಾಗುವದು. ನೀವು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ತಾ. 16ರಂದು ಟಿಕೆಟ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ಅಧ್ಯಕ್ಷರು ನೀಡಿದ್ದಾರೆ ಎಂದು ಕೋಯ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಮಾಜಿ ಸಚಿವ, ಜೆಡಿಎಸ್ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಿ.ಎ. ಜೀವಿಜಯ ಅವರ ಬೆಂಬಲಿಗರಾಗಿ ಕಳೆದ 20ವರ್ಷಗಳಿಂದಲೂ ದುಡಿದಿದ್ದು, ಈ ಬಾರಿ ಎಂಇಪಿ ಪಕ್ಷದಿಂದ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ ಎಂದು ಕೋಯ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.