ಮಡಿಕೇರಿ, ಏ. 11 : ನಾಪೋಕ್ಲುವಿನಲ್ಲಿ ನಡೆಯಲಿರುವ ಕುಲ್ಲೇಟಿರ ಕಪ್ ಕೊಡವ ಹಾಕಿ ಹಬ್ಬದಲ್ಲಿ ಕುಟುಂಬದ ವೀರ ಪುರುಷ ಕುಲ್ಲೇಟಿರ ಪೊನ್ನಣ್ಣ ಕುರಿತ ಕೃತಿಯನ್ನು ಬಿಡುಗಡೆ ಮಾಡಲಾಗುವದು ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ ``ಪಡೆಬೀರ ಕುಲ್ಲೇಟಿ ಪೊನ್ನಣ್ಣ’’ ಎಂಬ ಕೃತಿಯನ್ನು ತಾ.15 ರಂದು ಕೊಡವ ಹಾಕಿ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗುವದು. 22ನೇ ವರ್ಷದ ಕೊಡವ ಹಾಕಿ ಹಬ್ಬದಲ್ಲಿ ರಮೇಶ್ ಉತ್ತಪ್ಪ ಅವರ 22ನೇ ಕೃತಿ ಬಿಡುಗಡೆಯಾಗುತ್ತಿರುವದು ವಿಶೇಷವಾಗಿದೆ. ಕುಲ್ಲೇಟಿರ ಕುಟುಂಬದ ಕಾರೋಣ ಕುಲ್ಲೇಟಿ ಪೊನ್ನಣ್ಣ ಹಾಗೂ ಸಹೋದರ ಕುಲ್ಲೇಟಿ ಮಾಣಿಚ್ಚ ಅವರುಗಳ ಸಾಹಸವನ್ನು ಜನರಿಗೆ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ಕೊಡಗಿನ ಮೇಲೆ ಧಾಳಿ ನಡೆಸಿದ ಸಂದರ್ಭ ಇವರಿಬ್ಬರು ಹೋರಾಡಿದ ಪರಿ, ಪಿರಿಯಾಪಟ್ಟಣದ ಕೋಟೆಯಲ್ಲಿ ಸೆರೆಯಾಗಿದ್ದ ವೀರರಾಜೇಂದ್ರ ಒಡೆಯನನ್ನು ರಕ್ಷಿಸಿ ಕರೆತಂದದ್ದು, ಕುಶಾಲನಗರ ಕೋಟೆಯನ್ನು ವಶಪಡಿಸಿಕೊಂಡು, ಕಿಲ್ಲೇದಾರನ ರುಂಡವನ್ನು ಕಡಿದು ತಂದ ಸಾಹಸ ಸೇರಿದಂತೆ ಹಲವು ವಿಶೇಷತೆಗಳನ್ನು ಅಧ್ಯಯನ ನಡೆಸಿ ಅಪರೂಪದ ಕೃತಿಯನ್ನು ರಚಿಸಿದ್ದಾರೆ. ಇದಕ್ಕೆ ಪ್ರೊ. ಇಟ್ಟಿರ.ಕೆ.ಬಿದ್ದಪ್ಪ ಅವರು ಮುನ್ನುಡಿ ಬರೆದಿದ್ದಾರೆ. ಅಡಿಷನಲ್ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ಕುಲ್ಲೇಟಿರ ಕಪ್ ಸಮಿತಿ ಅಧ್ಯಕ್ಷ ಶಂಭು ಮಂದಪ್ಪ ತಿಳಿಸಿದ್ದಾರೆ