ಕುಶಾಲನಗರ, ಏ. 11: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವ ರಜೆಯಲ್ಲಿ ಬಂದಾತ ಮತ್ತೆ ಹಿಂತಿರುಗದೇ ದರೋಡೆ ಕಾರ್ಯದಲ್ಲಿ ತೊಡಗಿದ್ದವ ಹಾಗೂ ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರದ ಸರಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿ ತಡರಾತ್ರಿ ವೇಳೆ ಪ್ರಯಾಣಿಕರ ಚಿನ್ನಾಭರಣ ದೋಚುತ್ತಿದ್ದ ಕಳ್ಳರ ತಂಡವನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕುಶಾಲನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಸಹೋದರರಾಗಿದ್ದು, ನಗದು ಸೇರಿದಂತೆ ಒಟ್ಟು ರೂ. 4,50,000 ಮೌಲ್ಯದ ಸ್ವತ್ತನ್ನು ವಶಪಡಿಸಿ ಕೊಂಡಿದ್ದಾರೆ. ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಲಕ್ಷ್ಮಣ ಎಂಬವರ ಇಬ್ಬರು ಪುತ್ರರಾದ ಎನ್.ಎಲ್.ನವೀನ್ (20) ಮತ್ತು ಸುಬ್ರಮಣಿ (25) ಬಂಧಿತ ಆರೋಪಿಗಳು.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಇತ್ತೀಚೆಗೆ ಸಾರಿಗೆ ಬಸ್ ನಿಲ್ದಾಣದಲ್ಲಿ ತಡರಾತ್ರಿಯಲ್ಲಿ ಶೌಚಾಲಯಕ್ಕೆ ತೆರಳುತ್ತಿದ್ದ ಮಹಿಳೆಯರನ್ನು

(ಮೊದಲ ಪುಟದಿಂದ) ಗುರಿಯಾಗಿಸಿ ನಡೆಯುತ್ತಿದ್ದ ಸುಲಿಗೆ ಪ್ರಕರಣ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ ದೊಂದಿಗೆ ಡಿವೈಎಸ್ಪಿ ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿಗಳಾದ ಜಗದೀಶ್, ನವೀನ್‍ಗೌಡ ಮತ್ತು ಸಿಬ್ಬಂದಿಗಳ ತಂಡ ಪತ್ತೆ ಕಾರ್ಯ ಕೈಗೊಂಡಿದ್ದರು.

ಬಂಧಿತರಿಂದ ರೂ. 3, 90 000 ಮೌಲ್ಯದ 130 ಗ್ರಾಂ ಚಿನ್ನಾಭರಣ, 20,000 ಮೌಲ್ಯದ ಎರಡು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ. ಬಂಧಿತರ ಪೈಕಿ ಸುಬ್ರಮಣಿ ಕಳೆದ 4 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ರಜೆಯಲ್ಲಿ ಆಗಮಿಸಿದ ವ್ಯಕ್ತಿ ಮರಳಿ ಹಿಂದಿರುಗದೆ ಸುಲಿಗೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಪೊಲೀಸ್ ಅಪರಾಧ ಪತ್ತೆ ತಂಡದ ಪಿ.ಬಿ.ಸುರೇಶ್, ಪಿ.ಎಂ.ಮುಸ್ತಾಫ, ಕೆ.ಎಸ್.ಸುಧೀಶ್‍ಕುಮಾರ್, ಉದಯಕುಮಾರ್, ಸಂಪತ್‍ರೈ, ಸುಧೀಶ್‍ಕುಮಾರ್, ದಯಾನಂದ, ಜೋಸೆಫ್, ಲೋಕೇಶ್, ಚಾಲಕರಾದ ಪ್ರವೀಣ್, ಗಣೇಶ್, ಸೈಬರ್ ಕ್ರೈಂ ಸೆಲ್‍ನ ರಾಜೇಶ್, ಗಿರೀಶ್ ಮತ್ತಿತರರು ಇದ್ದರು. ಕುಶಾಲನಗರ ಮೂಲಕ ರಾತ್ರಿ ವೇಳೆ ನೂರಾರು ಸಾರಿಗೆ ಬಸ್‍ಗಳು ಓಡಾಡುತ್ತಿದ್ದು, ಮಹಿಳೆಯರು ಶೌಚಾಲಯಕ್ಕೆ ತೆರಳುವ ಸಮಯವನ್ನು ಹೊಂಚು ಹಾಕಿ ಆರೋಪಿ ಸಹೋದರರು ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ.