ಚೆಟ್ಟಳ್ಳಿ:, ಏ. 10: ಆರ್‍ಟಿಸಿಗಾಗಿ ಕೊಡಗಿನಲ್ಲಿ ರೈತರ ಪರದಾಟ ಇವತ್ತು ನಿನ್ನೆಯದಲ್ಲ. ಈ ಪಹಣಿ ಪತ್ರ (ಆರ್‍ಟಿಸಿ) ಜಾರಿಗೆ ಬಂದಲ್ಲಿಂದ ರೈತ ತನ್ನ ಭೂ ದಾಖಲೆಗಾಗಿ ತಾಲೂಕು ಕಚೇರಿಗೆ, ನಾಡ ಕಚೇರಿಗೆ ಅಲೆಯುವ ಪರಿಸ್ಥಿತಿ ಇನ್ನೂ ತಪ್ಪಿಲ್ಲ. ರೈತರಿಗೆಲ್ಲ ಗ್ರಾಮ ಮಟ್ಟದಲ್ಲಿ ಸಂಬಂಧಿತ ಪಂಚಾಯಿತಿಗಳಲ್ಲಿ ಆರ್‍ಟಿಸಿ ಸಿಗುವಂತೆ ವ್ಯವಸ್ಥೆ ಮಾಡಲಾದರೂ ಅಲ್ಲೂ ನೆಟ್‍ವರ್ಕ್ ಸಮಸ್ಯೆ, ಕಂಪ್ಯೂಟರ್ ಹಾಗೂ ಪ್ರಿಂಟರ್ ರಿಪೇರಿ, ಪೇಪರಿಲ್ಲ, ಸಿಬ್ಬಂದಿ ಇಲ್ಲ ಈ ರೀತಿ ನಿತ್ಯವೂ ನೂರೆಂಟು ಸಮಸ್ಯೆಗಳೇ.

ಸಹಕಾರಿ ಸಂಘಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಪಡೆದ ಬೆಳೆ ಸಾಲ ಪಾವತಿಸಿ ಮರು ಸಾಲ ಪಡೆಯಲು ಈ ಸಮಯವಾಗಿದ್ದು ಇತರ ದಾಖಲೆಯೊಂದಿಗೆ ಆರ್‍ಟಿಸಿ ಬೇಕೆನ್ನುವರು. ಅತ್ತ ನಾಡ ಕಚೇರಿಯಲ್ಲೂ ಇಲ್ಲ, ಇತ್ತ ಗ್ರಾಮಪಂಚಾಯಿತಿಯಲ್ಲೂ ದೊರೆಯದೆ ರೈತ ಪರದಾಡುವ ಪರಿಸ್ಥಿತಿಯಾಗಿದೆ.

ಚೆಟ್ಟಳ್ಳಿಯಲ್ಲೂ ಆರ್‍ಟಿಸಿಯ ಗೋಳು

ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಪಂಚಾಯಿತಿಯಲ್ಲಿ ಆನ್‍ಲೈನ್ ಮೂಲಕ ಆರ್‍ಟಿಸಿ ಪಡೆಯುವ ವ್ಯವಸ್ಥೆಯನ್ನು ಕಳೆದ ನಾಲ್ಕು ತಿಂಗಳ ಹಿಂದೆ ಕಲ್ಪಿಸಲಾಗಿತ್ತು. ಆರ್‍ಟಿಸಿಗಾಗಿ ದೂರದ ಸೋಮವಾರಪೇಟೆಯ ತಾಲೂಕು ಕಚೇರಿಗೂ ಹಾಗೂ ಸುಂಟಿಕೊಪ್ಪದ ನಾಡ ಕಚೇರಿಗೂ ಅಲೆಯುವ ಪರಿಸ್ಥಿತಿ ಕಡಿಮೆಯಾಗಿತ್ತು. ಆದರೆ ಪಂಚಾಯಿತಿಯಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದಾಗಿ ವೈಬ್‍ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ನಂತರದಲ್ಲಿ ಆರ್‍ಟಿಸಿ ಪಡೆಯಲು ಕಡಿವಾಣವಾಯಿತು. ಇಲಾಖೆ ಆರ್‍ಟಿಸಿಯ ದಾಖಲೆ ಪಡೆಯುವ ವೆಬ್‍ಸೈಟನ್ನು ಬದಲಾಯಿಸಿದೆ ವ್ಯವಸ್ಥೆಗಳು ಸರಿಯಾದ ನಂತರವೇ ರೈತರಿಗೆ ಪಂಚಾಯಿತಿಯಲ್ಲಿ ಆರ್‍ಟಿಸಿ ದೊರೆಯಲಿದೆ ಎಂದು ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹೇಳುತ್ತಾರೆ.

ಈ ಗ್ರಾಮಕ್ಕೆ ಸಂಬಂಧಿಸಿದ ಸುಂಟಿಕೊಪ್ಪದ ನಾಡ ಕಚೇರಿಯಲ್ಲೂ ಆರ್‍ಟಿಸಿ ಲಭ್ಯವಿಲ್ಲ. ಆರ್‍ಟಿಸಿಗಾಗಿ ಸುಮಾರು 45 ಕಿ.ಮೀ. ದೂರದ ಸೋಮವಾರಪೇಟೆಯ ತಾಲೂಕು ಕಚೇರಿಗೆ ತೆರಳುತ್ತಿರುವ ಪರಿಸ್ಥಿತಿ ಒಂದೆಡೆಯಾದರೆ ಅಲ್ಲೂ ಆರ್‍ಟಿಸಿ ಸಿಗದೆ ಹಿಂದಿರುಗಿದ ಪರಿಸ್ಥಿತಿಯಿದೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್‍ರವರ ಸುಂಟಿಕೊಪ್ಪ ನಾಡ ಕಚೇರಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಹಲವು ತಿಂಗಳಿಂದ ಆರ್‍ಟಿಸಿ ಸಿಗದೆ ರೈತರು ಪರದಾಡುತ್ತಿದ್ದರೂ ಎಲ್ಲ ಕಡೆ ಲಭ್ಯವಿದೆ ಎನ್ನುತಿರುವದು ವಿಪರ್ಯಾಸ.

ಎಲ್ಲಾ ಪಂಚಾಯಿತಿಯಲ್ಲೂ ಇದೇ ಗೋಳು

ಕೊಡಗಿನ ಎಲ್ಲಾ ತಾಲೂಕು ಕಚೇರಿ, ನಾಡ ಕಚೇರಿ, ಪಂಚಾಯಿತಿ ಕಚೇರಿಗಳಲ್ಲಿ ಆರ್‍ಟಿಸಿ ವ್ಯವಸ್ಥೆ ಕಲ್ವಿಸಲಾದರೂ ಎಲ್ಲಾ ಪಂಚಾಯಿತಿಗಳಲ್ಲೂ ಆರ್‍ಟಿಸಿ ಸಿಗುತಿಲ್ಲ. ಆರ್‍ಟಿಸಿಗೆ ಹೊಸ ವೆಬ್‍ಸೈಟನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರತೀ ಪಂಚಾಯಿತಿ ಹಣವನ್ನು ಪಾವತಿಸಿ ವೈಬ್‍ಸೈಟಿನ ಮುಖಾಂತರ ಆರ್‍ಟಿಸಿಯನ್ನು ರೈತರಿಗೆ ನೀಡುವ ವ್ಯವಸ್ಥೆ ಮಾಡಲಾಗುವದು. ಒಂದೆರಡು ತಿಂಗಳಲ್ಲಿ ಸಂಬಂಧಪಟ್ಟ ಆರ್‍ಟಿಸಿ ಕೇಂದ್ರಗಳಲ್ಲಿ ಜಾರಿಗೊಳಿಸುವ ವ್ಯವಸ್ಥೆ ಆಗುವದೆಂದು ಜಿಲ್ಲಾಧಿಕಾರಿಗಳ ಕಚೇರಿಯ ಭೂಮಿ ಸಾಫ್ಟ್ಟ್‍ವೇರ್‍ನ ಕನ್ಸಲ್ಟೆಂಟ್ ಮಿಲನ್ ಹೇಳುತ್ತಾರೆ.

ಚುನಾವಣೆಯ ಕಾರ್ಯದಲ್ಲಿ ಅಧಿಕಾರಿಗಳು

ಇಲಾಖಾಧಿಕಾರಿಗಳೆಲ್ಲ ಮುಂಬರುವ ಚುನಾವಣೆಯ ಕಾರ್ಯದಲ್ಲಿ ನಿರತರಾಗಿದಾಗ ರೈತನಿಗೆ ಸಿಗದ ಪಹಣಿಯ ಬಗ್ಗೆ ವಿಚಾರಿಸಲು ಯಾವದೇ ಅಧಿಕಾರಿಗೆ ಸಮಯವಿಲ್ಲ. ಚುನಾವಣೆ ಮುಗಿದ ನಂತರವೇ ಅಧಿಕಾರಿಗಳು ಜನಪ್ರತಿನಿಧಿಗಳೆಲ್ಲ ಸಿಗಬಹುದೆನ್ನಬಹುದು. ಜಿಲ್ಲಾಧಿಕಾರಿಗಳು ರೈತರು ಪರದಾಡುತ್ತಿರುವ ಪಹಣಿ ಪತ್ರದ ವ್ಯವಸ್ಥೆಯ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಂಡಾಗ ಮಾತ್ರ ಅನುಕೂಲವಾಗಲಿದೆ. - ಪುತ್ತರಿರ ಕರುಣ್ ಕಾಳಯ್ಯ