ವೀರಾಜಪೇಟೆ, ಏ. 10: ವಿಧಾನಸಭಾ ಸಾರ್ವತಿಕ ಚುನಾವಣೆಯ ಪ್ರಯುಕ್ತ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದ್ದು ಎಲ್ಲ ರಾಜಕೀಯ ಪಕ್ಷಗಳು ಇದನ್ನು ಪಾಲಿಸುವಂತೆ ಹಾಗೂ ಚುನಾವಣೆಗೆ ಸಂಬಂಧಿಸಿದ ರಾಜಕೀಯ ಪಕ್ಷಗಳ ಸಭೆ, ಮೆರವಣಿಗೆ, ಪ್ರಚಾರಕ್ಕೆ ಬಳಸಲು ಧ್ವನಿವರ್ಧಕಕ್ಕೆ 48 ಗಂಟೆಗಳ ಮುಂಚಿತವಾಗಿ ಕ್ಷೇತ್ರದ ಚುನಾವಣಾಧಿಕಾರಿಯಿಂದ “ಸುವಿಧ” ತಂತ್ರಾಂಶದಲ್ಲಿ ಅನುಮತಿ ಪಡೆಯಬಹುದು. ಅಂತರ್ಜಾಲ ತಾಣದಲ್ಲಿ (ಆನ್‍ಲೈನ್) ಪಕ್ಷದ ಪ್ರತಿನಿಧಿಗಳು ಯಾವ ರೀತಿಯಲ್ಲಿ ಅನುಮತಿ ಪಡೆಯಬಹುದು ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.
ಇಂದು ತಾಲೂಕು ಕಚೇರಿಯ ಚುನಾವಣಾಧಿಕಾರಿಯ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಪಕ್ಷದ ಪ್ರತಿನಿಧಿಗಳು ಚುನಾವಣಾ ಅಧಿಕಾರಿಗಳ ಕಚೇರಿಗೆ ಬಾರದೆ ಅಂತರ್ಜಾಲ ತಾಣದಲ್ಲಿಯೇ ದಾಖಲೆಗಳನ್ನು ಸಲ್ಲಿಸಿ ಸಭೆ ನಡೆಸಲು ಅನುಮತಿಗೆ ಅವಕಾಶವಿದೆ. ರಾಜಕೀಯ ಪಕ್ಷಗಳು ಮನೆಯಿಂದ ಮನೆಗೆ ಪ್ರಚಾರ ಕೈಗೊಳ್ಳುವ ಸಮಯದಲ್ಲಿಯೂ ಐದು ಮಂದಿಯ ಮಿತಿಯೊಳಗಿರಬೇಕು. ಸಾಕಷ್ಟು ಜನರನ್ನು ಕರೆದುಕೊಂಡು ಜಾತ್ರೆಯಂತೆ ಪ್ರಚಾರ ಮಾಡಲು ಅವಕಾಶವಿಲ್ಲ. ಪೂರ್ವಾನುಮತಿ ಪಡೆದ ನಂತರ ಸಭೆ ಸಮಾರಂಭಗಳ ಖರ್ಚು ವೆಚ್ಚಗಳನ್ನು ತಪ್ಪದೆ ಚುನಾವಣಾ ಕಚೇರಿಯಲ್ಲಿ ದಾಖಲಿಸಬೇಕು. ರಾಜಕೀಯ ಪಕ್ಷದ್ದೇ ಪ್ರತ್ಯೇಕ ವೆಚ್ಚ ಹಾಗೂ ಅಭ್ಯರ್ಥಿಯದ್ದೇ ಪ್ರತ್ಯೇಕ ವೆಚ್ಚವನ್ನು ದಾಖಲಿಸಬೇಕು. ಇದಕ್ಕಾಗಿ ಚುನಾವಣಾಧಿಕಾರಿಯಿಂದ “ಸಮಾಧಾನ್ ಸುವಿಧ” ತಂತ್ರಾಂಶದ ಅಂತರ ಜಾಲ ತಾಣದ ಯೋಜನೆಯನ್ನು ಜಾರಿಗೆ ತರಲಾಗಿದೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಗೆ ಅನುಮತಿ ಪಡೆಯಲು ಈ ತಂತ್ರಾಂಶ ಸರಳ ವಿಧಾನವಾಗಿದೆ ಎಂದು ಚುನಾವಣಾಧಿಕಾರಿ ಕೆ. ರಾಜು ತಿಳಿಸಿದರು.
ಈ ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಡಿವೈಎಸ್‍ಪಿ ನಾಗಪ್ಪ, ನೋಡೆಲ್ ಅಧಿಕಾರಿ ಪ್ರಭು, ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದು ಚುನಾವಣಾ ನೀತಿ ಸಂಹಿತೆಯ ಕುರಿತು ಪಕ್ಷದ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು.
ಚುನಾವಣಾಧಿಕಾರಿ ಆಯೋಜಿಸಿದ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.