ಕೂಡಿಗೆ, ಏ. 10: ವಿದ್ಯಾರ್ಥಿ ಸಮೂಹ ಪ್ರಸಕ್ತ ಸಂದರ್ಭದಲ್ಲಿ ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ, ಅಜ್ಞಾನದಿಂದ ಜ್ಞಾನ-ವಿಜ್ಞಾನದೆಡೆಗೆ ಚಲಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಗುರು ಮತ್ತು ಗುರಿಯನ್ನು ಹೊಂದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಹಾಗೂ ಕಾಲೇಜು ಅಬಿವೃದ್ಧಿ ಸಮಿತಿ ನಿರ್ದೇಶಕ ಹೆಚ್.ಹೆಚ್.ಸುಂದರ್ ಹೇಳಿದರು.

ಕುಶಾಲನಗರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು, ಬದುಕಿನ ಮೌಲ್ಯಗಳ ಮೂಲಕ ತನ್ನ ಬದಲಾವಣೆಗೆ ಸ್ಫ್ಪೂರ್ತಿ ನೀಡಿದಂತಾಗುತ್ತದೆ. ಅವಕಾಶಗಳು ದೊರೆತಾಗ ಅವುಗಳ ಸದ್ಭಳಕೆ ಮಾಡಿಕೊಂಡು ತನ್ನ ಜೀವನ ಪರಿಸ್ಥಿತಿಗೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳುವದು ಉತ್ತಮವಾದ ದಾರಿಯಾಗಿರುತ್ತದೆ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ರೀತಿಯ ಮನೋಧರ್ಮವನ್ನು ನೈತಿಕ ಮೌಲ್ಯದೊಂದಿಕೆ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಭಾಷಣಕಾರರಾದ ಸಾಹಿತಿ ಭಾರಧ್ವಾಜ್ ಆನಂದತೀರ್ಥ ಅವರು ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ತಿಳಿದು ಬದುಕು ಸಾಗಿಸಬೇಕು. ಅರಿವಿನ ಶಿಕ್ಷಣದ ಮೂಲಕ ತನ್ನ ಸುತ್ತಲಿನ ಸಮಾಜವನ್ನು ಅರಿಯಲು ಕಾರಣವಾಗುತ್ತದೆ. ವಿದ್ಯಾರ್ಥಿಗಳು ವಿದ್ಯೆಯಿಂದ ವಿನಯತೆಯನ್ನು ಕಲಿಯಬೇಕು. ಆ ವಿನಯತೆಯೇ ಅವರ ಭವಿಷ್ಯ ಉಜ್ವಲವಾಗಲು ಕಾರಣವಾಗುತ್ತದೆ. ವಿದ್ಯಾರ್ಥಿಗಳು ಎಲ್ಲವನ್ನೂ ಪಠ್ಯದ ಮೂಲಕವೇ ತಿಳಿಯಲು ಸಾಧ್ಯವಿಲ್ಲ. ಕೆಲವನ್ನು ಬಲ್ಲವರಿಂದ ತಿಳಿಯಬೇಕು, ಪುಸ್ತಕಗಳಿಂದ ಓದಿ ಅರಿಯಬೇಕು, ಶಾಸ್ತ್ರಜ್ಞರಿಂದ-ಜ್ಞಾನಿಗಳಿಂದ ಅವರ ಚಿಂತನೆಗಳನ್ನು ತಿಳಿಯಬೇಕು ಆಗ ಮಾತ್ರ ಪರಿಪೂರ್ಣವಾದ ಜ್ಞಾನ ಸಾಧಿಲು ಸಾಧ್ಯ ಎಂದರು. ಕಾಲೇಜಿನ ಪ್ರಾಧ್ಯಾಪಕ ಲಿಂಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆಯನ್ನು ಗಣಿ ಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಪಿ.ಟಿ.ಕಾಶಿಕುಮಾರ್, ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಸುಬ್ರಮಣಿ, ನಿವೃತ್ತ ಪ್ರಾಂಶುಪಾಲೆ ಭಾಗೀರಥಿ, ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಪಂಡರಿನಾಥ್ ನಾಯ್ಡು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಕೆ.ಮಂಜುನಾಥ್ ಪ್ರಧಾನ ಕಾರ್ಯದರ್ಶಿ ಸುಗುರಾಜ್, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎಂ.ಕೆ. ಲೋಹಿತ್ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.