ಸಿದ್ದಾಪುರು, ಏ. 10: ಕೊಟ್ಟಗೇರಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಹುಲಿಯು ಸೆರೆಯಾಗದ ಹಿನ್ನೆಲೆಯಲ್ಲಿ ಇದೀಗ ಅರಣ್ಯ ಇಲಾಖಾಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯಾಧಿಕಾರಿಗಳು ಹೊಸದೊಂದು ಉಪಾಯದ ಮೂಲಕ ವ್ಯಾಘ್ರನನ್ನು ಸೆರೆಹಿಡಿಯಲು ಶ್ರಮಿಸುತ್ತಿರುವ ಬಗ್ಗೆ ತಿಳಿದು ಬಂದಿದೆ.

ಬಾಳೆಲೆ ಸಮೀಪದ ಕೊಟ್ಟಗೇರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಹುಲಿಯು ಆ ಭಾಗದ ರೈತರ ಹಾಗೂ ನಿವಾಸಿಗಳ ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದರೂ, ಹುಲಿ ಸಿಗಲಿಲ್ಲ. ಆದರೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷಗೊಂಡಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿ ಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಮಂಗಳವಾರದಂದು ಹುಲಿಯು ಓಡಾಡಿರುವ ಎಲ್ಲಾ ಜಾಡುಗಳನ್ನು ಆನೆಗಳ ಮೂಲಕ ಸಿಬ್ಬಂದಿಗಳು ತೆರಳಿ ಕಂಡು ಹಿಡಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಹುಲಿಯು ವಿಶ್ರಾಂತಿ ಪಡೆಯುವ ಗುಹೆವೊಂದರ ಸುಳಿವು ಅರಣ್ಯ ಇಲಾಖಾಧಿಕಾರಿಗಳಿಗೆ ಲಭಿಸಿದ್ದು, ಆ ಸ್ಥಳದಲ್ಲಿ 20 ಅಡಿಗಳ ಅಗಲದ 2 ಪಂಜರಗಳನ್ನು ಕಬ್ಬಿಣದ ಸಲಾಕೆ ಹಲಗೆಗಳಿಂದ ತಯಾರಿಸಿ ಅದರ ಮೇಲೆ ಸೊಪ್ಪುಗಳಿಂದ ಮುಚ್ಚಿ ಒಳಗೆ ಅರಣ್ಯ ಸಿಬ್ಬಂದಿಗಳು, ಪಶು ವೈದ್ಯಾಧಿಕಾರಿ ಡಾ. ಮುಜೀಬ್, ಎಸಿಎಫ್ ಶ್ರೀಪತಿರವರು ರಾತ್ರಿ ಪೂರ್ತಿ ಕುಳಿತು ಹುಲಿ ಸೆರೆಹಿಡಿ ಯಲು ಹೊಸ ಉಪಾಯ ಕಂಡು ಹಿಡಿಯಲಾಗಿದೆ. ಹುಲಿ ಸೆರೆಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಲಿಯ ಚಲನ - ವಲನ ವೀಕ್ಷಿಸಲು ಮರಕ್ಕೆ ಏಣಿಯೊಂದನ್ನು ಅಳವಡಿಸಿ ಅದರಲ್ಲಿ ಮರದ ಹಲಗೆಗಳನ್ನು ಇಟ್ಟು 2 ಮಂದಿ ಸಿಬ್ಬಂದಿಗಳು ಅದರ ಮೇಲೆ ಕುಳಿತು ಗಮನಿಸಲಿದ್ದಾರೆ. ಅಂದಾಜು 15 ಅಡಿ ಎತ್ತರದ ಏಣಿಯ ಮೇಲೆ ಕುಳಿತು ಮಾಹಿತಿ ನೀಡಲಿದ್ದಾರೆಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.