ಗೋಣಿಕೊಪ್ಪಲು.ಏ.10.ಸತತ ನಾಲ್ಕೈದು ದಿನಗಳಿಂದ ವ್ಯಾಘ್ರನ ಸೆರೆಗೆ ಕಷ್ಟ ಪಡುತ್ತಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಲಾಖೆಯ ಕಾನೂನು ತೊಡಕಿನಿಂದ ಕಂಗೆಟ್ಟಿದ್ದು ಹುಲಿ ಸೆರೆಗೆ ಇನ್ನಿಲ್ಲದ ಪ್ರಯತ್ನ ನಡೆಸಿದರೂ ಮುಂಜಾನೆಯ ವೇಳೆಯಲ್ಲಿ ಹುಲಿ ಮಾತ್ರ ತನ್ನ ಸಂಚಾರವನ್ನು ಮಾಡುತ್ತಲೇ ಇದೆ. 60ಕ್ಕು ಹೆಚ್ಚಿನ ಅರಣ್ಯ ಸಿಬ್ಬಂದಿಗಳು ನಿದ್ರೆಗೆಟ್ಟು ಕೆಲಸ ನಿರ್ವಹಿಸುತ್ತಿದ್ದರು ಹುಲಿಯನ್ನು ಸೆರೆ ಹಿಡಿಯಲು ಮಾತ್ರ ಸಾಧ್ಯವಾಗುತ್ತಿಲ್ಲ. ಕಾನೂನಿನ ಪರಿಮಿತಿಯೊಳಗೆ ಕಾರ್ಯಾಚರಣೆ ಮಾಡಬೇಕೇ ಹೊರತು ಮುಕ್ತ ಕಾರ್ಯಾಚರಣೆ ಅಸಾಧ್ಯವೆಂಬದು ‘ಶಕ್ತಿ’ಗೆ ತಿಳಿದು ಬಂದ ಮಾಹಿತಿಯಾಗಿದೆ. ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯನವರ ತೋಟದ ಸಮೀಪದ ಕಾಡಿನಲ್ಲಿ ಹುಲಿ ಸಂಚಾರವಿದ್ದು ಕಳೆದ ರಾತ್ರಿ ಕರುವನ್ನು ಸಾಯಿಸಿದ್ದ ಸ್ಥಳಕ್ಕೆ ಮುಂಜಾನೆಯ ವೇಳೆಯಲ್ಲಿ ಆಗಮಿಸಿ ಇದರ ಕೊಳೆತ ಮಾಂಸವನ್ನು ಅರ್ಧ ಭಾಗ ತಿಂದು ಹೋಗಿದೆ. ಇದನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿದ್ದರೂ ಮುಂಜಾನೆಯ ಕತ್ತಲೆಯ ಮಂಜಿನಲ್ಲಿ ಹುಲಿಯ ಸಂಚಾರವನ್ನು ಗುರುತಿಸುವದು ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಹುಲಿಯ ಓಡಾಟ ಹೆಚ್ಚಾಗಿ ಕಂಡು ಬಂದರೂ ಹಗಲು ವೇಳೆಯಲ್ಲಿ ಈ ಭಾಗದ ಅರಣ್ಯ ಪ್ರದೇಶ, ತೋಟಗಳಲ್ಲಿ ಸಿಬ್ಬಂದಿಗಳು ಕಾದು ಕುಳಿತರು ಹುಲಿ ಈ ಭಾಗದಲ್ಲಿ ಸಂಚಾರ ಮಾಡುತ್ತಿಲ್ಲ. ತೋಟದ ಸುತ್ತಲೂ ಮತ್ತಿಗೋಡುವಿನ ಆನೆ ಕ್ಯಾಂಪ್‍ನಲ್ಲಿದ್ದ ಸಾಕಾನೆಗಳಾದ

(ಮೊದಲ ಪುಟದಿಂದ) ಅಭಿಮನ್ಯು, ಕೃಷ್ಣ, ದ್ರೋಣ ಹಾಗೂ ಭೀಮ ಸಂಚಾರ ನಡೆಸಿ ಹುಲಿ ಪತ್ತೆಗೆ ಸಿಬ್ಬಂದಿಗಳಿಗೆ ಸಹಕರಿಸುತ್ತಿದೆ. ನಾಗರಹೊಳೆ, ತಿತಿಮತಿ, ಭಾಗದ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ರ್ಯಾಪಿಡ್ ಪೋರ್ಸ್ ಸ್ಥಳದಲ್ಲಿ ಮೊಖಂ ಹೂಡಿದ್ದು ಹುಲಿ ಸೆರೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳಾದ ಡಿಎಫ್‍ಓ ಕ್ರಿಸ್ತರಾಜ್, ಎಸಿಎಫ್ ಪೌಲ್ ಆ್ಯಂಟೋನಿ, ಶ್ರೀಪತಿ, ಆರ್.ಎಫ್.ಓ. ಗಂಗಾಧರ್, ಕಿರಣ್, ಅಶೋಕ್ ಹುನುಗುಂದ ರವರುಗಳು ಸಿಬ್ಬಂದಿಗಳೊಂದಿಗೆ ಕಾಡಿನ ಮಧ್ಯೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಸಿಬ್ಬಂದಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಹುಲಿ ಸೆರೆಗೆ ಮುಂದಾಗಿರುವ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯನವರ ತೋಟಕ್ಕೆ ಕಳೆದ 4 ದಿನಗಳಿಂದ ಸತತವಾಗಿ ಮುಂಜಾನೆ 6 ಗಂಟೆಯ ಸುಮಾರಿಗೆ ತೆರಳುತ್ತಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಪ್ರತಿದಿನ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಶ್ರೀಪತಿ, ಪೊನ್ನಂಪೇಟೆ ಆರ್.ಎಫ್.ಓ. ಅವರನ್ನು ಭೇಟಿ ಮಾಡಿ ಕಾರ್ಯಾ ಚರಣೆಯ ವಿವರಗಳನ್ನು ಪಡೆಯುವ ಮೂಲಕ ಅರಣ್ಯ ಸಿಬ್ಬಂದಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

- ಹೆಚ್.ಕೆ. ಜಗದೀಶ್