ಸೋಮವಾರಪೇಟೆ,ಏ.10: ನಿನ್ನೆ ದಿನ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದ್ದು, ಸತತ ಪರಿಶ್ರಮದ ನಂತರ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಹೊರತೆಗೆಯಲಾಯಿತು.
ನಿನ್ನೆ ಮಧ್ಯಾಹ್ನ ಸೋಮವಾರಪೇಟೆ ಸಮೀಪದ ಕೂಗೇಕೋಡಿ-ಸಬ್ಬನಕೊಪ್ಪ ಗ್ರಾಮದ ಮಂಜುನಾಥ್ ಎಂಬವರ ಪುತ್ರ ಅಭೀಷೇಕ್(19) ಸೇರಿದಂತೆ ಆತನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಜಲಪಾತಕ್ಕೆ ತೆರಳಿದ್ದು, ಈ ಸಂದರ್ಭ ನೀರಿಗಿಳಿದ ಅಭಿಷೇಕ್ ಆಕಸ್ಮಿಕವಾಗಿ ಜಾರಿ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ.ನಿನ್ನೆ ಸಂಜೆಯವರೆಗೂ ಮೃತದೇಹಕ್ಕಾಗಿ ಹುಡುಕಾಟ ನಡೆದಿದ್ದು, ಸಂಜೆಗತ್ತಲಾದ್ದರಿಂದ ಮೃತದೇಹ ಗೋಚರವಾಗಲಿಲ್ಲ. ಇಂದು ಮತ್ತೆ ನೀರಿಗಿಳಿದು ಹುಡುಕಾಟ ನಡೆಸಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 20 ಅಡಿಗೂ ಅಧಿಕ ಆಳದಲ್ಲಿ ಸಿಲುಕಿದ್ದ ಮೃತದೇಹವನ್ನು ಗುಂಡ್ಯದ ಮುಳುಗು ತಜ್ಞ ದಯಾನಂದ್ ಅವರು ಹೊರತೆಗೆದರು.
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅಭಿಷೇಕ್ ಶನಿವಾರದಂದು ಊರಿಗೆ ಆಗಮಿಸಿದ್ದು, ಮೊನ್ನೆ ನಡೆದ ಗ್ರಾಮದ ಪೂಜೆಯಲ್ಲಿ ಪಾಲ್ಗೊಂಡು ನಿನ್ನೆ ಬೆಳಗ್ಗೆ ಸ್ನೇಹಿತರೊಂದಿಗೆ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ನೇಹಿತರೆಲ್ಲರೂ ಜಲಪಾತದ ಕಲ್ಲುಬಂಡೆಗಳ ಮೇಲೆ ಕುಳಿತಿದ್ದ ಸಂದರ್ಭ ಅಭಿಷೇಕ್ ತನ್ನ ಬಟ್ಟೆ ಬಿಚ್ಚಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ಸುಮಾರು 100 ಅಡಿಗೂ ಎತ್ತರದಿಂದ ನೀರು ಧುಮ್ಮಿಕ್ಕುವ ಪ್ರದೇಶದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಸ್ನೇಹಿತರು ನೋಡನೋಡುತ್ತಿದ್ದಂತೆ ಕಣ್ಮರೆಯಾಗಿದ್ದ.
ಮೃತ ಅಭಿಷೇಕ್ ಕೂಗೇಕೋಡಿ ಗ್ರಾಮದ ಸಬ್ಬನಕೊಪ್ಪ ಗ್ರಾಮದ ತಂದೆ ಮಂಜುನಾಥ್, ತಾಯಿ ರತ್ನ ಸೇರಿದಂತೆ ಸಹೋದರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಇಂದು ನೆರವೇರಿತು.