ಮಡಿಕೇರಿ, ಏ. 11: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತಾ. 17ರಿಂದ ಆರಂಭಗೊಳ್ಳಲಿದೆ. ಏಪ್ರಿಲ್ 24 ಇದಕ್ಕೆ ಅಂತಿಮ ದಿನವಾಗಿದ್ದು, ದಿನಗಳು ಸಮೀಪಿಸುತ್ತಿದ್ದರೂ ಕೊಡಗಿನಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಟಿಕೆಟ್ ಕುರಿತಾಗಿ ದಿನಕ್ಕೊಂದು ಬೆಳವಣಿಗೆಗಳು ಮುಂದುವರಿದಿದೆಯೇ ಹೊರತು, ಇನ್ನೂ ಅಭ್ಯರ್ಥಿಗಳಾರು ಎಂದು ಖಚಿತಪಟ್ಟಿಲ್ಲ. ಈ ಕಾರಣದಿಂದಾಗಿ ಆಯಾ ಪಕ್ಷ ಹಾಗೂ ಆಕಾಂಕ್ಷಿಗಳ ಬೆಂಬಲಿಗರೂ ಪ್ರಶ್ನಾರ್ಹಭಾವದಿಂದಲೇ ಇದ್ದಾರೆ. ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪ್ರಕಟಿಸಿರುವ ಮೊದಲ 72 ಜನರ ಪಟ್ಟಿಯಲ್ಲಿ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಹೆಸರನ್ನು ಅಖೈರುಗೊಳಿಸಲಾಗಿದ್ದು, ವೀರಾಜಪೇಟೆ ಕ್ಷೇತ್ರದ ಹಾಲಿ ಶಾಸಕ, ವಿಧಾನಸಭಾ ಮಾಜಿ ಅಧ್ಯಕ್ಷರಾದ ಪ್ರಭಾವಿ ನಾಯಕ ಕೆ.ಜಿ. ಬೋಪಯ್ಯ ಅವರ ಹೆಸರು ಬಿಜೆಪಿಯ ಮೊದಲ ಪಟ್ಟಿಯಲ್ಲಿ ಇಲ್ಲದಿರುವದು ಹಲವರ ಹುಬ್ಬೇರಿಸಿದೆ. ಈ ನಡುವೆ ಸ್ವತಃ ಕೆ.ಜಿ. ಬೋಪಯ್ಯ ಹಾಗೂ ಅವರ ಬೆಂಬಲಿಗರು ರಾಜ್ಯ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದಾರೆ. ಎರಡನೇ ಪಟ್ಟಿಯಲ್ಲಿ ಅವಕಾಶ ಕಲ್ಪಿಸುವ ಭರವಸೆ ದೊರೆತಿದೆಯಾದರೂ ಹತ್ತು ಹಲವಾರು ರೀತಿಯಲ್ಲಿ ರಾಜಕೀಯ ಚರ್ಚೆಗಳು ಕೇಳಿಬರುತ್ತಿವೆ.

ಇನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು

(ಮೊದಲ ಪುಟದಿಂದ) ಅಂತಿಮಗೊಳಿಸಲು ತೀವ್ರ ಕಸರತ್ತು ನಡೆಸುತ್ತಿವೆ. ನಿನ್ನೆ ಹಾಲಿ ಶಾಸಕರು ಸೇರಿದಂತೆ 130 ಮಂದಿಯ ಹೆಸರು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದನ್ನು ‘ಕೈ’ ಪಕ್ಷದ ಪ್ರಥಮ ಪಟ್ಟಿ ಎನ್ನಲಾಗಿತ್ತು. ಆದರೆ ಈ ಪಟ್ಟಿಯಲ್ಲಿ ಕೊಡಗಿನ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿರಲಿಲ್ಲ. ಈ ನಡುವೆ ಈ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಒಪ್ಪಿಕೊಂಡಿಲ್ಲ. ಎ.ಐ.ಸಿ.ಸಿ.ಗೆ ವರದಿ ಸಲ್ಲಿಸಲಾಗಿದೆಯೇ ಹೊರತು, ಈ ಪಟ್ಟಿ ಅಂತಿಮವಲ್ಲ. ಇದು ಕೇವಲ ಊಹಾಪೋಹವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಪ್ರಚಾರವಾಗಿರುವದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯದ ಅಲ್ಲಲ್ಲಿ ಕಂಡುಬರುತ್ತಿರುವ ಬಂಡಾಯದ ಬಿಸಿಯೂ ಅಭ್ಯರ್ಥಿಗಳ ಆಯ್ಕೆಯನ್ನು ಮುಂದೂಡಲು ಕಾರಣವೆನ್ನಲಾಗುತ್ತಿದೆ. ಇಂತಹವರಿಗೇ ಟಿಕೆಟ್ ಎಂಬ ಮಾತು ದಟ್ಟವಾಗಿದ್ದರೂ, ಈ ವಿಚಾರ ಅಂತಿಮಗೊಳ್ಳದಿರುವ ಕಾರಣದಿಂದಾಗಿ ಇತರ ಆಕಾಂಕ್ಷಿಗಳೂ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಈಗಾಗಲೇ ಮಡಿಕೇರಿಗೆ ಬಿ.ಎ. ಜೀವಿಜಯ ಹಾಗೂ ವೀರಾಜಪೇಟೆಗೆ ಸಂಕೇತ್ ಪೂವಯ್ಯ ಅವರನ್ನು ಅಭ್ಯರ್ಥಿಗಳಾಗಿ ಘೋಷಣೆ ಮಾಡಿರುವ ಪ್ರಾದೇಶಿಕ ಪಕ್ಷ ಜೆ.ಡಿ.ಎಸ್. ಮಾತ್ರ ಒಂದಷ್ಟು ನಿರಾಳವಾಗಿ ತನ್ನ ಅಭಿಯಾನದಲ್ಲಿ ನಿರತವಾಗಿದೆ ಎನ್ನಬಹುದು.