ಕೂಡಿಗೆ, ಏ. 10: ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಮಾನವ ಹಕ್ಕುಗಳ ಪರಿಪಾಲನೆ ಬಹುಮುಖ್ಯ. ಇತ್ತೀಚಿನ ದಿನಗಳಲ್ಲಿ ಭಾರತ ದೇಶ ಮಾತ್ರವಲ್ಲ ವಿಶ್ವಾದ್ಯಂತ ಮಾನವ ಹಕ್ಕುಗಳ ದುರುಪಯೋಗವಾಗುತ್ತಿರುವದು ವಿಷಾದದ ಸಂಗತಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಎ.ಎಂ.ಖಾನ್ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಮಾನವ ಹಕ್ಕುಗಳ ಅರಿವು ಮತ್ತು ರಕ್ಷಣೆಯ ಕುರಿತು ನಡೆದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಿಸರದ ಸುತ್ತಮುತ್ತ ನಡೆಯುತ್ತಿರುವ ಅಮಾನವೀಯ ಘಟನೆಗಳ ಬಗ್ಗೆ ಇಂದಿನ ಯುವ ಸಮುದಾಯ ಗಮನಹರಿಸುವ ಮೂಲಕ ಮಾನವ ಹಕ್ಕುಗಳ ಕುರಿತಾದ ವಿವಿಧ ಆಯಾಮಗಳ ಹಿನ್ನೆಲೆಯಲ್ಲಿ ಸಂಶೋಧನೆಗಳನ್ನು ನಡೆಸಬೇಕಾಗಿದೆ. ಮಾನವ ಹಕ್ಕುಗಳು ಮತ್ತು ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವದರ ಬಗ್ಗೆ ಯುವಜನತೆ ಎಚ್ಚರ ವಹಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಹರೀಶ್ ರಾಮಸ್ವಾಮಿ ಮಾತನಾಡಿ, ಮಾನವತೆ ಅರ್ಥವಾಗಿದ್ದವರಿಗೆ ಮಾತ್ರ ಮಾನವ ಹಕ್ಕುಗಳ ಮೌಲ್ಯದ ಅರಿವು ಇರುತ್ತದೆ. ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿನಿತ್ಯ ಹಲವಾರು ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವದರಿಂದ ಇಂದಿನ ಯುವಜನತೆ ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವದು ಅಗತ್ಯವಾಗಿದೆ. ಹಾಗೆ ಮಾಡಿದಾಗ ಮಾತ್ರವೇ ಮಾನವನನ್ನು ಮಾನವನನ್ನಾಗಿ ನೋಡುವದಕ್ಕೆ ಸಾಧ್ಯ ಎಂದರು.
(ಮೊದಲ ಪುಟದಿಂದ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಪಿ.ಎಲ್.ಧರ್ಮ ಮಾತನಾಡಿ, ಪ್ರತಿಯೊಬ್ಬರೂ ಸಮಾಜದಲ್ಲಿನ ಕಾನೂನುಗಳನ್ನು ಗೌರವಿಸಿದಾಗ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ. ಸಮಾಜದಲ್ಲಿನ ಅಸಮಾನತೆಯನ್ನು ನಿವಾರಣೆ ಮಾಡುವಲ್ಲಿ ಮಾನವಹಕ್ಕುಗಳು ಪ್ರಭಾವ ಬೀರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ.ಎಸ್.ಯಡಪಡಿತ್ತಾಯ, ಸಹ ಪ್ರಾಧ್ಯಾಪಕಿ ಡಾ.ಕೆ.ಆರ್.ಶಾನಿ, ಸಹ ಸಂಚಾಲಕ ಎಚ್.ಎಸ್.ವೆಂಕಟೇಶ, ಸಂಘಟನಾ ಕಾರ್ಯದರ್ಶಿ ಬಿ.ಎಸ್.ಮಮತಾ, ಜಂಟಿ ಸಂಘಟನಾ ಕಾರ್ಯದರ್ಶಿ ಸಿ.ಎಸ್.ತಾರಾ, ದೈಹಿಕ ಉಪನಿರ್ದೇಶಕ ಡಾ.ಟಿ.ಕೇಶವಮೂರ್ತಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು. ಸಲ್ಮಾ ಕಾರ್ಯಕ್ರಮ ನಿರೂಪಿಸಿ, ಅನಿಲ್‍ಕುಮಾರ್ ಸ್ವಾಗತಿಸಿ, ಪ್ರಸನ್ನ ವಂದಿಸಿದರು.